ಪುತ್ತೂರು: ಇಲ್ಲಿನ ಬೆಟ್ಟಂಪ್ಪಾಡಿಯ ಪಾರೆ ಎಂಬಲ್ಲಿ ಯುವಕನ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದೆ. ಕುತ್ತಿಗೆಗೆ ನಾಯಿ ಸಂಕೋಲೆ ಬಿಗಿದ ಪರಿಣಾಮದಿಂದಲೇ ಆಗಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ತಾಯಿ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಚೇತನ್ (33) ಮೃತಪಟ್ಟ ಯುವಕ. ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೋಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಚೇತನ್ ನೇಣು ಬಿಗಿದು ಮೃತಪಟ್ಟಿರುವ ಬಗ್ಗೆ ಆತನ ತಾಯಿ ಪೋಲೀಸ್ ದೂರು ದಾಖಲಿಸಿದ್ದರು. ಚೇತನ್ ಗುರುವಾರ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಬಳಿಕ ತಾಯಿಯೊಂದಿಗೆ ಜಗಳವಾಡಿ ಮನೆಪಕ್ಕದ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದಾನೆ. ಇದನ್ನು ಯೂಸುಫ್ ಅವರು ಚೇತನ್ ತಾಯಿಗೆ ಕರೆ ಮಾಡಿ ತಿಳಿಸಿದ್ದರು. ಅಲ್ಲಿಗೆ ಬಂದ ಚೇತನ್ ತಾಯಿ ಉಮಾವತಿಯವರು ನಾಯಿಯನ್ನು ಕಟ್ಟುವ ಸಂಕೊಲೆಯನ್ನು ಚೇತನ್ ಸೊಂಟಕ್ಕೆ ಹಾಕಿ ಮನೆಗೆ ಎಳೆದೊಯ್ದಿದ್ದರು. ಈ ವೇಳೆ ಯೂಸುಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಚೇತನ್‌ನನ್ನು ಮನೆಗೆ ಎಳೆದೊಯ್ದಿದ್ದರು ಎನ್ನಲಾಗಿದೆ. ಸಂಕೋಲೆ ಎಳೆಯುವ ಸಮಯದಲ್ಲಿ ಚೇತನ್ ಕುತ್ತಿಗೆಗೆ ಸಂಕೋಲೆ ಸುತ್ತಿಕೊಂಡಿದೆ. ಕುತ್ತಿಗೆಯ ಸಂಕೋಲೆ ಬಿಗಿದು ಚೇತನ್ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಘಟನೆಗೆ ಸಂಬಂಧಿಸಿದಂತೆ ತಾಯಿ ಉಮಾವತಿ ಸೇರಿದಂತೆ ಮೂವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಶವಪರೀಕ್ಷೆಯಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.