ವಿಮಾನದಿಂದ ಸಮುದ್ರಕ್ಕೆ ಹಾರುತ್ತೇನೆ ಎಂದ ಪ್ರಯಾಣಿಕ – ದೂರು ದಾಖಲು

ಮಂಗಳೂರು : ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ವಿಮಾನ ಸಮುದ್ರದ ಮೇಲಿರುವಾಗ ಹೊರಗೆ ಹಾರುತ್ತೇನೆಂದು ಹೇಳಿ ಭೀತಿ ಹುಟ್ಟಿಸಿದ ವಿಲಕ್ಷಣ ವಿದ್ಯಮಾನ ನಡೆದಿದೆ.

ಈ ಬಗ್ಗೆ ಬಜಪೆ ಠಾಣೆಯಲ್ಲಿ ಏರ್ ಇಂಡಿಯಾ ಸಿಬ್ಬಂದಿ ದೂರು ನೀಡಿದ್ದಾರೆ. ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಸೆಕ್ಯೂರಿಟಿ ಕೋ- ಆಡಿನೇಟರ್‌ಆಗಿರುವ ಸಿದ್ದಾರ್ಥದಾಸ್ ಈ ಬಗ್ಗೆ ಮೊಹಮ್ಮದ್ ಎಂಬವರ ವಿರುದ್ಧ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊಹಮ್ಮದ್ ಎಂಬವರು ಮೇ 8 ರಂದು ರಾತ್ರಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಮರುದಿನ ಬೆಳಗ್ಗೆ 7.30 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ದುಬೈನಿಂದ ವಿಮಾನ ಹೊರಟ ನಂತರ ಮೊಹಮ್ಮದ್ ಶೌಚಾಲಯಕ್ಕೆ ತೆರಳಿದ್ದು ನಂತರ ಹೊರಬಂದು ವಿಮಾನದ ಪ್ರಯಾಣಿಕರಲ್ಲದ ಕೃಷ್ಣ ಎಂಬವರ ಬಗ್ಗೆ ಸಿಬ್ಬಂದಿ ಬಳಿ ವಿಚಾರಿಸಿದ್ದರು. ಅಸಂಬದ್ಧ ಪ್ರಶ್ನೆಗಳನ್ನು ಕೇಳಿ, ವಿಮಾನದ ಸಿಬ್ಬಂದಿ ವರ್ಗದವರಿಗೆ ತೊಂದರೆ ನೀಡಿದ್ದರು.

ವಿಮಾನದಲ್ಲಿ ಪರಿಚಾರಕ ಸಿಬ್ಬಂದಿ ಆತನ ಹತ್ತಿರವಿದ್ದರೂ ಪದೇ – ಪದೇ ಕಾಲಿಂಗ್ ಬಟನ್ ಪ್ರೆಸ್ ಮಾಡಿತೊಂದರೆ ಮಾಡುತ್ತಿದ್ದ. ನಂತರ ವಿಮಾನದಲ್ಲಿದ್ದ ಲೈಫ್ ಜಾಕೆಟ್ ಅನ್ನು ತೆಗೆದು ಸಿಬ್ಬಂದಿಯ ಕೈಗೆ ನೀಡಿ, ವಿಮಾನ ಇಳಿದ ನಂತರ ಇದನ್ನು ಬಳಸುವುದಾಗಿ ತಿಳಿಸಿದ್ದನು.ವಿಮಾನ ಸಮುದ್ರದ ಮೇಲಿರುವಾಗ ತಾನು ವಿಮಾನದಿಂದ ಹೊರಗಿಳಿಯಬೇಕು, ಕೆಳಕ್ಕೆ ಹಾರಬೇಕು ಎಂದು ಹೇಳಿ ತನ್ನ ಮತ್ತು ಇತರ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುತ್ತಾನೆ ಎ೦ದು ಪೊಲೀಸರಿಗೆ ದೂರು ನೀಡಲಾಗಿದೆ.

Leave a Reply