ಮಲ್ಪೆ: ಆದಿವುಡುಪಿ ಬಳಿಯ ಹೊಟೇಲೊಂದಕ್ಕೆ ಮಂಗಳವಾರ ಹತ್ತಿಕೊಂಡ ಬೆಂಕಿಯನ್ನು ನಂದಿಸಲು ಧಾವಿಸಿ ಬಂದ ಅಗ್ನಿಶಾಮಕ ದಳದ ವಾಹನದಲ್ಲಿ ನೀರಿಲ್ಲದೆ ಕಟ್ಟಡ ಸಂಪೂರ್ಣ ಸುಟ್ಟು ಹೋಗಿದೆ!
ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಬ್ರಹ್ಮಗಿರಿಯಲ್ಲಿರುವ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಅರ್ಧಗಂಟೆಯ ಬಳಿಕ ಬಂದ ವಾಹನ ಮತ್ತು ಸಿಬಂದಿ ಕಾರ್ಯಾಚರಣೆಗೆ ತಯಾರಿ ನಡೆಸುವಾಗ ವಾಹನದಲ್ಲಿ ನೀರಿಲ್ಲ ಎಂಬುದು ಗೊತ್ತಾಯಿತು. ತತ್‌ಕ್ಷಣ ನೀರು ತುಂಬಿಕೊಂಡು ಬರುತ್ತೇವೆ ಎಂದು ಮಲ್ಪೆಯತ್ತ ತೆರಳಿದ ವಾಹನ ಮರಳಿ ಬರಲೇ ಇಲ್ಲ ಎಂದು ನಗರಸಭೆ ಸದಸ್ಯ ಸುಂದರ್ ಜೆ. ಕಲ್ಮಾಡಿ ಆರೋಪಿಸಿದ್ದಾರೆ.
ಅಷ್ಟರಲ್ಲಿ ಮಳೆ ಬಂದಿದ್ದರಿಂದ ಮಳೆ ನೀರು ಮತ್ತು ರಸ್ತೆ ಬದಿಯ ಹೊಂಡದಲ್ಲಿ ಸಂಗ್ರಹವಾಗಿದ್ದ ನೀರನ್ನೇ ಬಳಸಿಕೊಂಡು ಸ್ಥಳದಲ್ಲಿ ಉಳಿದಿದ್ದ ದಳದ ಕೆಲವು ಸಿಬಂದಿ ಬೆಂಕಿಯನ್ನು ನಂದಿಸಿದರು. ಆದರೆ ಅಷ್ಟರಲ್ಲಿ ಸಾಕಷ್ಟು ಹಾನಿ ಸಂಭವಿಸಿತ್ತು. ಈ ಬಗ್ಗೆ ಮಾಹಿತಿಗಾಗಿ ಉದಯವಾಣಿ ಪ್ರತಿನಿಧಿಯು ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದಾಗ ಯಾವುದೇ ಮಾಹಿತಿ ಲಭಿಸಿಲ್ಲ.