Visitors have accessed this post 396 times.

ಪದವೀಧರರ ಚುನಾವಣೆ: ಬಿಜೆಪಿಯನ್ನು ಸೋಲಿಸುವುದು ನಮ್ಮ ಮೊದಲ ಆದ್ಯತೆ- ಎಸ್.ಡಿ.ಪಿ.ಐ

Visitors have accessed this post 396 times.

ಮಂಗಳೂರು: ಜೂನ್ 3 ರಂದು ಕರ್ನಾಟಕ ವಿಧಾನ ಪರಿಷತ್ ನ ಶಿಕ್ಷಕರ ಕ್ಷೇತ್ರ ಮತ್ತ ಪದವೀಧರರ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷ ಕೋಮುವಾದಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕೆಲವು ಕ್ಷೇತ್ರಗಳಲ್ಲಿ ಜಾತ್ಯಾತೀತ ಅಭ್ಯರ್ಥಿಗಳನ್ನು ಮತ್ತು ಕೆಲವು ಕ್ಷೇತ್ರಗಳಲ್ಲಿ ಜಾತ್ಯಾತೀತ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ಸಂದರ್ಭದಲ್ಲಿಯೂ ಕೋಮುವಾದಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಸಂವಿಧಾನ ವಿರೋಧಿ ಪಕ್ಷವಾದ ಬಿಜೆಪಿಯನ್ನು ಸೋಲಿಸಲು ಶ್ರಮಿಸಬೇಕಾಗಿರುವುದು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ. ಆ ಜವಾಬ್ದಾರಿಯನ್ನು ಎಸ್.ಡಿ.ಪಿ.ಐ ಪಕ್ಷ ಹಿಂದೆಯೂ ನಿಭಾಯಿಸಿದೆ ಮತ್ತು ಮುಂದೆಯೂ ನಿಭಾಯಿಸುತ್ತಲೇ ಇರುತ್ತದೆ. ಕಳೆದ ವಿಧಾನಸಭಾ ಚುನಾವಣೆಗಳಲ್ಲಿಯೂ ಕೂಡ ನಾವು ಸ್ಪರ್ಧಿಸಿದ 16 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಾತ್ಯಾತೀತ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿತ್ತು. ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿಯೂ ನಮ್ಮ ಪಕ್ಷ ಅದೇ ನಿರ್ಧಾರವನ್ನು ತೆಗೆದುಕೊಂಡಿದೆ.

ವಿಧಾನ ಪರಿಷತ್ ನ ಶಿಕ್ಷಕರ ಕ್ಷೇತ್ರ ಮತ್ತ ಪದವೀಧರರ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗಳಲ್ಲಿ ನಮ್ಮ ಪಕ್ಷ ಬೆಂಬಲಿಸಲಿರುವ ಜಾತ್ಯಾತೀತ / ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

ಶಿಕ್ಷಕರ ಕ್ಷೇತ್ರ

1) ಆಗ್ನೇಯ ಶಿಕ್ಷಕರ ಕ್ಷೇತ್ರ – ಡಿ. ಟಿ. ಶ್ರೀನಿವಾಸ್ (ಕಾಂಗ್ರೆಸ್)
2) ನೈಋತ್ಯ ಶಿಕ್ಷಕರ ಕ್ಷೇತ್ರ – ಡಾ. ಕೆ. ಕೆ. ಮಂಜುನಾಥ್ ಕುಮಾರ್ (ಕಾಂಗ್ರೆಸ್)
3) ದಕ್ಷಿಣ ಶಿಕ್ಷಕರ ಕ್ಷೇತ್ರ – ಮರಿತಿಬ್ಬೆಗೌಡ ( ಕಾಂಗ್ರೇಸ್ )

ಪದವೀಧರರ ಕ್ಷೇತ್ರ

1) ಈಶಾನ್ಯ ಪದವೀಧರರ ಕ್ಷೇತ್ರ – ಅಬ್ದುಲ್ ಜಬ್ಬಾರ್ ಗೋಲ ( ಪಕ್ಷೇತರ )
2) ನೈಋತ್ಯ ಪದವೀಧರರ ಕ್ಷೇತ್ರ – ಬಿ. ಮೊಹಮ್ಮದ್ ತುಂಬೆ (ಪಕ್ಷೇತರ)
3) ಬೆಂಗಳೂರು ಪದವೀಧರರ ಕ್ಷೇತ್ರ – ರಾಮೋಜಿ ಗೌಡ (ಕಾಂಗ್ರೆಸ್)

ನೈಋತ್ಯ ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ನಮ್ಮ ಪಕ್ಷ ಅವರಿಗೆ ಬೆಂಬಲ ನೀಡುವುದಿಲ್ಲ. ಆಯನೂರು ಮಂಜುನಾಥ್, ಸಂಘ ಪರಿವಾರದ ಹಿನ್ನೆಲೆ ಇದ್ದು ಅವರು ಎಂದಿಗೂ ಒಂದು ಸಿದ್ದಾಂತಕ್ಕೆ ಕಟಿಬದ್ದರಾದವರಲ್ಲ. ಅವರು ಯಾವುದೇ ಕ್ಷಣ ಬಿಜೆಪಿ ಅಥವಾ ಜೆಡಿಎಸ್ ಕಡೆ ವಾಲುವ ಮನಸ್ಥಿತಿಯ ವ್ಯಕ್ತಿಯಾಗಿದ್ದಾರೆ. ಜೊತೆ ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಕೋಮುವಾದಿ ಗೂಂಡಾ ಪಡೆಗಳನ್ನು ಕಟ್ಟಿ ಹಾಕುವಲ್ಲಿ ಸಂಪೂರ್ಣ ಸೋತಿದೆ ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರ ಆ ಗೂಂಡಾ ಪಡೆಗಳಿಗೆ ಶರಣಾಗಿದೆ. ಹರೀಶ್ ಪೂಂಜಾ ಎಂಬ ರೌಡಿ ಶಾಸಕ ಪೊಲೀಸ್ ಠಾಣೆಗೆ ನುಗ್ಗಿ ಪೋಲಿಸರಿಗೆ ಬೆದರಿಕೆ ಹಾಕಿದರೂ, ತಹಶೀಲ್ದಾರರನ್ನು ವಯಕ್ತಿಕವಾಗಿ ಹೀಯಾಳಿಸಿದರೂ ಕಾಂಗ್ರೆಸ್ ಸರ್ಕಾರಕ್ಕೆ ಆ ಶಾಸಕನನ್ನು ಬಂಧಿಸುವ ಧೈರ್ಯವಿಲ್ಲ. ಶರಣ್ ಪಂಪ್ವೆಲ್ ಎಂಬ ಬಜರಂಗದಳದ ಗೂಂಡಾ ಮಸ್ಲಿಮರ ವಿರುದ್ಧ ನಿರಂತರ ದ್ವೇಷ ಕಾರುತ್ತಿದ್ದರೂ, ಮಂಗಳೂರಿನ ಕಂಕನಾಡಿಯ ನಮಾಝ್ ಪ್ರಕರಣದಲ್ಲಿ ಹಿಂಸೆಗೆ ಮುಂದಾಗುವುದಾಗಿ ಬೆದರಿಕೆ ಹಾಕಿದರೂ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯನವರ ಸರ್ಕಾರ ವಿಫಲವಾಗಿದೆ. ಆದರೆ ನಮಾಝ್ ನಿರ್ವಹಿಸಿದ್ದನ್ನೇ ಅಪರಾಧ ಮಾಡಿ ಅಮಾಯಕರ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿತ್ತು. ಸಾರ್ವಜನಿಕರ ಮತ್ತು ಎಸ್.ಡಿ.ಪಿ.ಐ ಪಕ್ಷದ ತೀವ್ರ ಪ್ರತಿರೋಧದ ನಂತರ ಆ ಪ್ರಕರಣವನ್ನು ವಾಪಸ್ ಪಡೆದಿತ್ತು. ನಂತರ ಬಜರಂಗಿ ಗೂಂಡಾ ಶರಣ್ ಪಂಪ್ವೆಲ್ ನ ಪ್ರಚೋದನಕಾರಿ ಹೇಳಿಕೆಗೆ ನಾವು ಹೆದರುವುದಿಲ್ಲ ಎಂದು ಹೇಳಿದ ಒಂದೇ ಕಾರಣಕ್ಕೆ ನಮ್ಮ ಪಕ್ಷದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಅವರ ವಿರುದ್ಧ ಮತ್ತದೇ ಸುಮೋಟೋ ಕೇಸು ದಾಖಲಿಸಿಕೊಂಡು ನೋಟೀಸು ನೀಡಿದೆ. ಇದು ನಕಲಿ ಜಾತ್ಯಾತೀತ ವಾದವಲ್ಲದೆ ಮತ್ತೇನು? ಈ ಎಲ್ಲ ಕಾರಣಗಳಿಗಾಗಿ ನೈಋತ್ಯ ಪದವೀಧರರ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಗೆ ನಮ್ಮ ಪಕ್ಷದ ಬೆಂಬಲ ಇರುವುದಿಲ್ಲ. ಆ ಕ್ಷೇತ್ರದಲ್ಲಿ ನಮ್ಮ ಪಕ್ಷ ಪಕ್ಷೇತರ ಅಭ್ಯರ್ಥಿ ಬಿ. ಮೊಹಮ್ಮದ್ ತುಂಬೆ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದೆ ಎಂದು ಭಾಸ್ಕರ ಪ್ರಸಾದ್ ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದವರು;
1.ರಿಯಾಜ್ ಕಡoಬು, ರಾಜ್ಯ ಸಮಿತಿ ಸದಸ್ಯರು
2.ನವಾಝ್ ಉಳ್ಳಾಲ್ ರಾಜ್ಯ ಸಮಿತಿ ಸದಸ್ಯರು
3.ಅಶ್ರಫ್ ಅಡ್ಡೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕನ್ನಡ
4.ಸುಹೈಲ್ ಫಳ್ನೀರ್, ಜಿಲ್ಲಾ ಕಾರ್ಯದರ್ಶಿ

Leave a Reply

Your email address will not be published. Required fields are marked *