October 25, 2025
WhatsApp Image 2024-06-06 at 5.19.15 PM

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯಬೇಕಿದ್ದ ಚುನಾವಣೆಯಲ್ಲಿ ಎಲ್ಲಾ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ 7, ಬಿಜೆಪಿಯ 3 ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಹನ್ನೊಂದು ಸದಸ್ಯರನ್ನು ಆಯ್ಕೆ ಮಾಡಲು ದೈವಾರ್ಷಿಕ ಚುನಾವಣೆಯನ್ನು ದಿನಾಂಕ 13ನೇ ಜೂನ್. 2024 ರಂದು ನಿಗದಿಪಡಿಸಲಾಗಿತ್ತು. ಚುನಾವಣೆಗೆ ದಿನಾಂಕ 27.05.2024 ರಿಂದ 03.06.2024ರ ವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಸದರಿ ಅವಧಿಯಲ್ಲಿ ಒಟ್ಟು 12 ಜನ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಸದರಿ ನಾಮಪತ್ರಗಳನ್ನು ದಿನಾಂಕಾ 04.06.2024 ರಂದು ಪರಿಶೀಲನೆಗೆ ತೆಗೆದುಕೊಳ್ಳಲಾಗಿತ್ತು. ಪರಿಶೀಲನೆಯ ಸಂದರ್ಭದಲ್ಲಿ ಆಸಿಫ್ ಪಾಷಾ ಆರ್.ಎಮ್. ಎಂಬುವವರ ನಾಮಪತ್ರವು ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದ್ದು, ಉಳಿದ 11 ಜನ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿದ್ದವು.

ದಿನಾಂಕ:06.06.2024 ರಂದು ಮಧ್ಯಾಹ್ನ 3.00 ಗಂಟೆಯವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದ್ದು, ಯಾರು ನಾಮಪತ್ರವನ್ನು ಹಿಂಪಡೆದಿರುವುದಿಲ್ಲ. ಖಾಲಿ ಇರುವ ಸ್ಥಾನಗಳಿಗೆ ಭರ್ತಿ ಮಾಡಬೇಕಾದ 11 ಸ್ಥಾನಗಳಿಗೆ 11 ಜನ ಅಭ್ಯರ್ಥಿಗಳು ಮಾತ್ರ ಅಂತಿಮವಾಗಿ ಕಣದಲ್ಲಿದ್ದರು.

ಈ ಹಿನ್ನಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಐವಾನ್ ಡಿ’ ಸೋಜಾ, ಕೆ. ಗೋವಿಂದರಾಜ್, ಜಗದೇವ ಗುತ್ತೇದಾರ್, ಬಲ್ಲೀಸ್ ಬಾನು, ಎನ್‌.ಎಸ್. ಬೋಸರಾಜು, ಡಾ. ಯತೀಂದ್ರ ಎಸ್. ಹಾಗೂ ಎ. ವಸಂತ ಕುಮಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಇನ್ನು, ಭಾರತೀಯ ಜನತಾ ಪಾರ್ಟಿಯ ಮೂಳೆ ಮಾರುತಿರಾವ್, ಸಿ.ಟಿ. ರವಿ, ರವಿಕುಮಾರ ಎನ್ ಹಾಗೂ ಜನತಾದಳ(ಜಾ) ಪಕ್ಷದ ಟಿ.ಎನ್‌. ಜವರಾಯಿ ಗೌಡ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಧೈವಾರ್ಷಿಕ ಚುನಾವಣೆ 2024 ಚುನಾವಣಾಧಿಕಾರಿ ಹಾಗೂ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಆದೇಶ ಹೊರಡಿಸಿದ್ದಾರೆ.

About The Author

Leave a Reply