
ಬೆಂಗಳೂರು: ಅತ್ಯಾಚಾರ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಹಾಜರಾಗದೆ ಉಳಿದಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಇಂದು ಎಸ್ಐಟಿ ಮುಂದೆ ಹಾಜರಾಗಬೇಕಿದೆ. ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಇಂದು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಆದೇಶಿಸಿದೆ. ಅದರಂತೆ ಮುಂದಿನ ಶುಕ್ರವಾರದವರೆಗೂ ಬಂಧನದಿಂದ ರಿಲೀಫ್ ಪಡೆದಿರುವ ಭವಾನಿ ರೇವಣ್ಣರಿಗೆ ಹಾಸನ ಹಾಗೂ ಕೆ.ಆರ್.ನಗರ ಪ್ರವೇಶಿಸದಂತೆ ಸೂಚಿಸಲಾಗಿದೆ. ಮೇ 2ರಂದು ಕೆ.ಆರ್.ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೇ 15ರಂದು ಎಸ್ಐಟಿ ನೋಟಿಸ್ ನೀಡಿತ್ತು. ನೋಟೀಸ್‌ಗೆ ಪ್ರತಿಯಾಗಿ ಉತ್ತರಿಸಿದ್ದ ಭವಾನಿ ರೇವಣ್ಣ ‘ಪ್ರಕರಣದಲ್ಲಿ ತನಿಖೆಗೆ ಅಗತ್ಯವಿದ್ದರೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ತಾವು ಇರುವುದಾಗಿ’ ಪತ್ರದ ಮುಖೇನ ತಿಳಿಸಿದ್ದರು. ಅದರಂತೆ ಜೂನ್ 1ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗಿನ ಅವಧಿಯಲ್ಲಿ ವಿಚಾರಣೆಗೆ ಲಭ್ಯವಿರುವಂತೆ ಸೂಚಿಸಿ ಎಸ್ಐಟಿ ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೆ ಭವಾನಿ ರೇವಣ್ಣ ಗೈರಾಗಿದ್ದರು.


