
ನವದೆಹಲಿ : ದೇಶದ ಮುಸ್ಲಿಮರು ಮದರಸಾ ಅಂತ ಯಾವುದೇ ಕಟ್ಟುಪಾಡುಗಳಿಗೆ ಕಟ್ಟುಬೀಳದೆ, ಈ ಆಧುನಿಕ ಜಗತ್ತಿನಲ್ಲಿ ತಮ್ಮ ಬೌದ್ಧಿಕ ಬೆಳವಣಿಗೆ ಕಡೆ ಗಮನ ವಹಿಸಬೇಕೆಂದು ಸಲಹೆ ನೀಡಿರುವ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ, ಪ್ರಧಾನಿ ಮೋದಿ ಅಧಿಕಾರಕ್ಕೂ ಬರುವ ಮುನ್ನವೇ ಈ ದೇಶದಲ್ಲಿ ಸಾಕಷ್ಟು ತಪ್ಪುಗಳು ನಡೆದಿವೆ ಎಂದಿದ್ದಾರೆ. ಮೋದಿ ಸರ್ಕಾರದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆಯ ನಡುವೆ ನಾಸಿರುದ್ದೀನ್ ಶಾ ಅವರ ಸಲಹೆ ಮಹತ್ವ ಪಡೆದುಕೊಂಡಿದೆ. ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಾಸಿರುದ್ದೀನ್ ಶಾ, ಮುಸ್ಲಿಮರು ಹಿಜಾಬ್ ಮತ್ತು ಸಾನಿಯಾ ಮಿರ್ಜಾರ ಸ್ಕರ್ಟ್ನ ಉದ್ದದ ಬಗ್ಗೆಯೇ ಸದಾ ಚಿಂತಿಸುತ್ತಾರೆ. ಅದನ್ನು ಬಿಟ್ಟು ಶಿಕ್ಷಣದ ಕಡೆ ಗಮನ ಹರಿಸಬೇಕು ಹಾಗೂ ಮದರಸಾಗಳ ಬದಲಾಗಿ ಪ್ರಬುದ್ಧತೆ ಮತ್ತು ಆಧುನಿಕ ಕಲ್ಪನೆಯನ್ನು ಬೆಳಸಿಕೊಳ್ಳಬೇಕು ಎಂದು ಮಹತ್ವದ ಸಲಹೆಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ ನಾಸಿರುದ್ದೀನ್ ಶಾ, ಮೋದಿಯನ್ನು ವಿರೋಧಿಸುವುದು ತುಂಬಾ ಸುಲಭ. ಆದರೆ, ಮೋದಿ ಬರುವುದಕ್ಕೂ ಮುಂಚೆಯೇ ಈ ದೇಶದಲ್ಲಿ ಸಾಕಷ್ಟು ತಪ್ಪುಗಳು ನಡೆದಿದ್ದವು. ನಮ್ಮ ದೇಶದಲ್ಲಿ ಯಾವಾಗಲೂ ಧರ್ಮಗಳ ನಡುವಿನ ದ್ವೇಷದ ಒಳಹರಿವು ಇದೆ ಎಂದು ವಾಸ್ತವಾಂಶವನ್ನು ತೆರೆದಿಟ್ಟರು.


