ಬಂಟ್ವಾಳ: ಏಕಾಏಕಿ ಮನೆಯೊಂದರ ಕಾಂಪೌಂಡ್ ಕುಸಿದು ಅಲ್ಲಿಯೇ ಸಂಚರಿಸುತ್ತಿದ್ದ ಪಾದಚಾರಿಗಳಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗುಡ್ಡೆಯಂಗಡಿ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಗುಡ್ಡೆಯಂಗಡಿ ನಿವಾಸಿಗಳಾದ ಮಹಮ್ಮದ್ ಸಾದಿಕ್, ಮಹಮ್ಮದ್ ರಫೀಕ್ ಎಂಬವರು ಗಾಯಾಳುಗಳು. ಸದ್ಯ ಇಬ್ಬರನ್ನೂ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಇವರಲ್ಲಿ ಮಹಮ್ಮದ್ ಸಾದಿಕ್ ಅವರಿಗೆ ಗಂಭೀರವಾಗಿ ಗಾಯವಾಗಿದ್ದು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಗುಡ್ಡೆಯಂಗಡಿ ಅಬ್ದುಲ್ ರಹಮಾನ್ ಎಂಬವರ ಮನೆಯ ಕಾಂಪೌಂಡ್ ಮಂಗಳವಾರ ಮಧ್ಯರಾತ್ರಿ ಸುರಿದ ಮಳೆಗೆ ಕುಸಿದಿದೆ. ಸುಮಾರು 12 ಗಂಟೆ ವೇಳೆಗೆ ಲಾರಿ ನಿಲ್ಲಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಮ್ಮದ್ ಸಾದಿಕ್ ಹಾಗೂ ಮಹಮ್ಮದ್ ರಫೀಕ್ ಮೇಲೆಯೇ ಈ ಕಂಪೌಂಡ್ ಕುಸಿದು ಬಿದ್ದಿದೆ. ಇವರಿಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿದ್ದಾರೆ.