ಮಂಗಳೂರು : ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿರುವುದು ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI)ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಹಾಗೂ ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.
ಕರ್ನಾಟಕ ಸರಕಾರವು ಪೆಟ್ರೋಲ್ ಮತ್ತು ಡೀಜೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿರುವುದರಿಂದಾಗಿ ಪೆಟ್ರೋಲ್ ಬೆಲೆ 3 ರೂ, ಡೀಸೆಲ್ ಬೆಲೆ 3 ರೂ. 50 ಪೈಸೆ ಹೆಚ್ಚಳವಾಗಿದೆ. 85 ರೂ 93 ಪೈಸೆಯಿದ್ದ ಡೀಸೆಲ್ ಬೆಲೆ 89 ರೂ. 20 ಪೈಸೆಗೆ ಏರಿಕೆಯಾಗಿದ್ದರೆ, 100 ರೂಪಾಯಿ ಇದ್ದ ಪೆಟ್ರೋಲ್ ದರ 103 ರೂ.ಗೆ ಹೆಚ್ಚಳಗೊಂಡಿದೆ.
ಪೆಟ್ರೋಲ್, ಡಿಸೇಲ್ ಬೆಲೆಗಳು ದೈನಂದಿನ ಬದುಕಿಗೆ ಜನಸಾಮಾನ್ಯರು ಬಳಸುವ ಅಗತ್ಯ ಸರಕುಗಳ ಮೇಲೆಯೂ ಪರಿಣಾಮ ಬೀರುತ್ತವೆ. ಕಳೆದ ವರ್ಷ ಬರಗಾಲ ಬಿದ್ದಿರುವುದರಿಂದಾಗಿ ಗ್ರಾಮೀಣ ಪ್ರದೇಶದ ಜನತೆ ಸಂಕಷ್ಠವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ತೈಲ ಬೆಲೆ ಏರಿಸಿರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಪೆಟ್ರೋಲ್-ಡೀಸೆಲ್ ಮೇಲಿನ ಮಾರಾಟ ತೆರಿಗೆ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ.