ಉಳ್ಳಾಲ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಕೊಟ್ಯ ಎಂಬಲ್ಲಿ ಜೂ.18 ರ ತಡರಾತ್ರಿ 2ರ ಸುಮಾರಿಗೆ ಮನೆ ಬಾಗಿಲುಗಳನ್ನು ಜೋರಾಗಿ ಬಡಿದ ಘಟನೆ ಬಂಡಿಕೊಟ್ಯ ಎಂಬಲ್ಲಿ ನಡೆದಿದ್ದು, ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ತಂಡವೇ ಮಧ್ಯರಾತ್ರಿ ಬಾಗಿಲು ತಟ್ಟಿದ್ದ ಕೃತ್ಯ ಎಸಗಿರುವ ಶಂಕೆ ಉಳ್ಳಾಲ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬಂಡಿಕೊಟ್ಯದಲ್ಲಿರುವ ವೆಲ್ಡರ್ ವೃತ್ತಿ ನಡೆಸುತ್ತಿರುವ ಪರಶುರಾಮ ಎಂಬವರಿಗೆ ಸೇರಿದ ಮನೆ ಹಾಗು ಅವರ ಬಾಡಿಗೆಯಲ್ಲಿದ್ದ ಕೃಷ್ಣ ,ಪುಷ್ಪಕಲಾ, ಪ್ರೇಮ್ ಎಂಬವರ ಮನೆ ಬಾಗಿಲುಗಳನ್ನು ಐವರ ತಂಡ ನಡುರಾತ್ರಿ ಬಡಿದಿದೆ. ಜೋರಾಗಿ ಬಡಿದ ಹಿನ್ನೆಲೆಯಲ್ಲಿ ಬೆದರಿದ ಪರಶುರಾಮ್ ತಕ್ಷಣ ಉಳ್ಳಾಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ .
ರೌಂಡ್ ನಲ್ಲಿದ್ದ ಉಳ್ಳಾಲ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ತಂಡ ಪರಾರಿಯಾಗಿದೆ. ಇದೀಗ ನಿನ್ನೆ ಉದ್ಯಮಿ ಮನೆಯಲ್ಲಿ ನಡೆದಿರುವ ದರೋಡೆ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ತಂಡದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಉಳ್ಳಾಲದ ಸಾರ್ವಜನಿಕರಿಗೆ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ಪ್ರಕಟಣೆ ಹೊರಡಿಸಿದ್ದು,ಉಳ್ಳಾಲದಲ್ಲಿ ಕೆಲವು ದಿನಗಳಿಂದ ಅಪರಿಚಿತ ಏಳೆಂಟು ಜನರು ಠಾಣಾ ವ್ಯಾಪ್ತಿಯ ಕೆಲವು ಒಂಟಿ ಮನೆ ಹಾಗೂ ಬೀಗ ಜಡಿದಿರುವ ಮನೆಗಳಿಗೆ ತೆರಳುತ್ತಿರುವ ಬಗೆ ಗುಪ್ತಚರ ಮೂಲಕ ಮಾಹಿತಿ ಲಭ್ಯವಾಗಿದೆ.ಆದ್ದರಿಂದ ಈ ಠಾಣಾ ವ್ಯಾಪ್ತಿಯ ಜನರು ಈ ವಿಚಾರದಲ್ಲಿ ಸದಾ ಎಚ್ಚರದಿಂದ ಇರಬೇಕು.
ಈ ಪ್ರದೇಶದಲ್ಲಿ ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ.ಮನೆ ಬಳಿ ಯಾರಾದರೂ ಬಂದರೆ ಪರಿಶೀಲಿಸಿ ಬಾಗಿಲು ತೆಗೆಯಬೇಕು.ಅಪರಿಚಿತರು ಎಂದು ಕಂಡು ಬಂದಲ್ಲಿ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ 9480802315 ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಬಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.