
ಉಡುಪಿ: ನಿಲ್ಲಿಸಿದ್ದ ಬಸ್ ಗೆ ಫಾರ್ಚೂನರ್ ಕಾರೊಂದು ಡಿಕ್ಕಿ ಹೊಡೆದ ಘಟನೆ ಉಡುಪಿಯ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಿಗ್ಗೆ ನಡೆದಿದೆ.



ಶೋರೂಂಗೆ ಹೋಗುತ್ತಿದ್ದ ಹೊಚ್ಚ ಹೊಸ ಫಾರ್ಚೂನರ್ ಕಾರು ಅಪಘಾತಕ್ಕೀಡಾಗಿದೆ. ಕುಂದಾಪುರ ಶೋರೂಂ ನಿಂದ ಮಂಗಳೂರು ಶೋರೂಂಗೆ ಹೊಸ ಕಾರನ್ನು ಚಾಲಕ ಕೊಂಡೊಯ್ಯುತ್ತಿದ್ದನು. ನಿಟ್ಟೂರಿಗೆ ತಲುಪುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಿಟಿ ಬಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಬಸ್ ನ ಹಿಂಬದಿಗೂ ಹಾನಿಯಾಗಿದೆ.
ಕಾರು ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಮಾಹಿತಿ ತಿಳಿದ ಕೂಡಲೇ ಶೋರೂಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.