ಶಾಸಕರಗಳನ್ನು ಸರ್ಕಾರದ ಖರ್ಚಲ್ಲಿ ವಿದೇಶಕ್ಕೆ ಕಳುಹಿಸುವ ನಿಯಮವಿಲ್ಲ, ನಾವು ಕಳಿಸಲ್ಲ – ಯು.ಟಿ.ಖಾದರ್

ಮಂಗಳೂರು: ಶಾಸಕರುಗಳನ್ನು ಸರ್ಕಾರದ ಖರ್ಚಿನಲ್ಲಿ ವಿದೇಶಕ್ಕೆ ಕಳುಹಿಸುವ ನಿಯಮ ನಮ್ಮಲಿಲ್ಲ. ಹಾಗಾಗಿ ನಾವು ಕಳಿಸಲ್ಲ. ಅವರವರ ವೈಯಕ್ತಿಕ ಖರ್ಚಿನಲ್ಲಿ ಯಾರೂ ಕೂಡ ಹೋಗಬಹುದು ಎಂದು ಮಂಗಳೂರಿನಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ರಾಜ್ಯದ ಶಾಸಕರ ವಿದೇಶ ಪ್ರವಾಸಕ್ಕೆ ಸಿದ್ಧತೆ ವಿಚಾರದಲ್ಲಿ ಮಾತನಾಡಿದ ಅವರು, ಶಾಸಕರ ವಿವಿಧ ಸಮಿತಿ ಅಧ್ಯಯನಕ್ಕೆ ದೇಶದ ವಿವಿಧ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಮಾಡಬಹುದು. ಆದ್ದರಿಂದ ರಾಜ್ಯ ಪ್ರವಾಸಗಳಿಗೆ ಒಪ್ಪಿಗೆ ಕೊಟ್ಟಿದ್ದೇನೆ. ಕೊಡುತ್ತೇನೆ ಕೂಡಾ. ಆದರೆ ವಿದೇಶಕ್ಕೆ ಕಳುಹಿಸುವುದಕ್ಕೆ ನಮ್ಮಲ್ಲಿ ಯಾವುದೇ ನಿಯಮವಿಲ್ಲ. ಆದ್ದರಿಂದ ಅನುಮತಿ ಕೊಡಲಾಗಿಲ್ಲ ಎಂದರು. ರಾಜಕಾರಣಿಗಳ ವಿಚಾರದಲ್ಲಿ ಜನಾಭಿಪ್ರಾಯ ಬರುವುದು ಸಹಜ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತದೆ. ಯಾರೂ ಶಾಸಕರುಗಳನ್ನು ವೈರಿಗಳಂತೆ ಕಾಣದಿರಿ. ಶಾಸಕರನ್ನು ಸಹೋದರರಂತೆ, ಮಿತ್ರರಂತೆ ಕಾಣಿರಿ. ಸರ್ಕಾರದ ಖರ್ಚಿನಲ್ಲಿ ಹೋಗುವುದಿಲ್ಲ. ಆದರೆ ಸ್ವಂತ ಖರ್ಚಲ್ಲಿ ಹೋಗಬಾರದೆಂದರೆ ಹೇಗೆ? ಸರ್ಕಾರದ ಖರ್ಚಿನಲ್ಲಿ ಬೇರೆಲ್ಲರೂ ಪ್ರವಾಸ ಹೋಗುತ್ತಾರೆ. ಶಾಸಕರು ಹೋಗುವಾಗ ಯಾಕೆ ಎಲ್ಲರಿಗೂ ನೋವಾಗೋದು. ಜನಸೇವೆ ಮಾಡುವವರು ಸವಲತ್ತು ತಗೋಬಾರದು ಅಂದ್ರೆ ಆಗುತ್ತಾ?.‌ ಅಧಿಕಾರದಲ್ಲಿ ಇದ್ದಾಗ ಬಿಡಿ, ಅಧಿಕಾರ ಇಲ್ಲದಾಗ ಅವರ ಬಳಿ ಏನೂ ಇರದ ಉದಾಹರಣೆಗಳಿದೆ. ಈಗ ಶಾಸಕರ ವಿದೇಶ ಪ್ರವಾಸಕ್ಕೆ ಅನುಮತಿಗೆ ನಮ್ಮಲ್ಲಿ ಅವಕಾಶವಿಲ್ಲ. ನಾನೀಗ ಶಾಸಕನಾಗಿ ಸಭಾಧ್ಯಕ್ಷನಾಗಿದ್ದು, ನನ್ನ ಕ್ಷೇತ್ರಕ್ಕೆ ಅನುದಾನ ಬಂದಿದೆ. ನಮ್ಮ ಬೇಡಿಕೆ ಬಹಳಷ್ಟಿದೆ, ಒಂದೇ ವರ್ಷದಲ್ಲಿ ಎಲ್ಲ ಕೊಡುವುದಕ್ಕೆ ಆಗಲ್ಲ. ನಾನು ಕೇಳಿದ ಅನುದಾನ ಹಂತಹಂತವಾಗಿ ಬಿಡುಗಡೆಯಾಗಿದೆ. ಎಲ್ಲರಿಗೂ ಇದೇ ರೀತಿ ಅನುದಾನ ಬಿಡುಗಡೆಯಾಗೋ ವಿಶ್ವಾಸವಿದೆ ಎಂದರು.

Leave a Reply