ಮಂಗಳೂರು : ನಾವು ಎಷ್ಟೇ ಜಾಗೃತರಾಗಿದ್ದರು ಕೂಡ ಕೆಲವೊಂದು ಬಾರಿ ವಂಚನೆಗೆ ಒಳಗಾಗುತ್ತೇವೆ. ಅದರಲ್ಲೂ ಆನ್ಲೈನ ಷೇರು ಮಾರುಕಟ್ಟೆ ಇರಬಹುದು. ಆನ್ಲೈನ್ ಹಣದ ವ್ಯವಹಾರ ಇರಬಹುದು ಅಥವಾ ಹೂಡಿಕೆ ಇರಬಹುದು ಸುಲಭವಾಗಿ ಮೋಸ ಹೋಗುತ್ತೇವೆ.ಇದೀಗ ಆನ್‌ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ, ಮಂಗಳೂರು ನಗರದ ನಿವಾಸಿಯೊಬ್ಬರಿಂದ 1.50 ಕೋಟಿ ರೂ.
ಪಡೆದು ವಂಚಿಸಿರುವ ಪ್ರಕರಣ ನಡೆದಿದೆ.
ಹೌದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 1.50 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ದೂರುದಾರರು ಫೇಸ್‌ಬುಕ್ ಬಳಸುತ್ತಿದ್ದಾಗ ಒಂದು ಪೋಸ್ಟ್ ನೋಡಿ, ಅದರಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ, ಮೊಬೈಲ್ ಸಂಖ್ಯೆ ನಮೂದಿಸಿದ್ದರು. ಮೇ 3ರಂದು ಅಪರಿಚಿತ ವ್ಯಕ್ತಿಯೊಬ್ಬ ದೂರುದಾರರನ್ನು ಪೋಸ್ಟ್ ಬಂದಿದ್ದ ಗ್ರೂಪ್ಗೆ ಸೇರ್ಪಡೆಗೊಳಿಸಿದ್ದ.
ವಂಚನೆಗೆ ಒಳಗಾದ ವ್ಯಕ್ತಿ ಷೇರು ಮಾರ್ಕೆಟ್‌ಗೆ ಸಂಬಂಧಿಸಿದಂತೆ ಖಾತೆಯೊಂದನ್ನು ತೆರೆದಿದ್ದರು. ಷೇರುಗಳನ್ನು ಖರೀದಿಸಿ ಲಾಭ ಗಳಿಸುವ ಉದ್ದೇಶದಿಂದ ಮೇ 28ರಿಂದ ಜೂನ್ 28ರ ವರೆಗೆ ಹಂತ – ಹಂತವಾಗಿ 73 ಲಕ್ಷ ರೂ. ಹಾಗೂ 77 ಲಕ್ಷ ರೂ. ಸೇರಿದಂತೆ ಒಟ್ಟು 1.50 ಕೋಟಿ ರೂ.ಗಳನ್ನು ಅಪರಿಚಿತ ವ್ಯಕ್ತಿ ನೀಡಿದ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಕೆಲವು ದಿನಗಳ ಬಳಿಕ ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಮುಂದಾದಾಗ ವಿಥ್ ಡ್ರಾ ಮಾಡಲು ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಮಂಗಳೂರು ನಗರ ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.