Visitors have accessed this post 249 times.
ಮಂಗಳೂರು: ಬಿಜೆಪಿ ಆತ್ಮವಂಚನೆ ಮಾಡಿಕೊಳ್ತಾ ಇದೆ. ವಾಲ್ಮೀಕಿ ಇಲಾಖೆಯಲ್ಲಿ ಹಗರಣ ಆಗಿದೆ ಕ್ರಮ ಕೈಗೊಂಡಿದ್ದೇವೆ. ಅದನ್ನೇ ರಾಜಕೀಯಕ್ಕೆ ಬಳಸಿಕೊಂಡು ಪಾದಯಾತ್ರೆ ಮಾಡುವುದಾದರೆ ನಿಮ್ಮ ಸರಕಾರ ಇದ್ದಾಗ ಇಲಾಖೆಯ ಹಣ ನುಂಗಿ ನೀರು ಕುಡಿದಿರುವ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುಧಾಕರ್ ಮನೆಗೆ ಮಾಡಿ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಪತ್ರಿಕಾಗೋಷ್ಟಿಯಲ್ಲಿ ಗುಡುಗಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತಾಡಿದ ಅವರು, ಸುಧಾಕರ್ ಕೊರೋನ ಹೆಸರಲ್ಲಿ ನೂರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ. ಕೋಟ ಶ್ರೀನಿವಾಸ್ ಪೂಜಾರಿ, ಬೊಮ್ಮಾಯಿ ಖುದ್ದು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅವರ ಮನೆಗೆ ಯಾಕೆ ಬಿಜೆಪಿಗರು ಪಾದಯಾತ್ರೆ ಮಾಡುವುದಿಲ್ಲ? ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಅದರ ಮುಂದುವರಿದ ಭಾಗವೇ ಇದು. ಹಗರಣದಲ್ಲಿ ಬಂಧಿತರಾದವರಿಗೆ ಉದ್ದೇಶ ಪೂರ್ವಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹೇಳುವಂತೆ ಬೆದರಿಕೆ ಹಾಕಲಾಗುತ್ತಿದೆ. ರಾಜ್ಯದ ಜನರಲ್ಲಿ ಸರಕಾರ ಬೀಳುತ್ತದೆ ಎಂದು ಗುಲ್ಲೆಬ್ಬಿಸಿ ದಾರಿ ತಪ್ಪಿಸುತ್ತಿದ್ದಾರೆ. ಈ ಬಾರಿ ಕೋಟ ಶ್ರೀನಿವಾಸ್ ಪೂಜಾರಿ ಸಹಿತ ಎಲ್ಲರನ್ನು ಜೈಲಿಗೆ ಕಳುಹಿಸುತ್ತೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಅಶ್ರಫ್ ಕೆ, ಪ್ರಕಾಶ್ ಸಾಲಿಯಾನ್, ವಿಕಾಸ್ ಶೆಟ್ಟಿ, ಅಪ್ಪಿ, ಸತೀಶ್ ಪೆಂಗಲ್, ಭಾಸ್ಕರ್ ರಾವ್, ಎಂ ಪಿ ಮನುರಾಜ್, ಇಮ್ರಾನ್ ಎ ಆರ್, ಪ್ರೇಮ್ ಬಲ್ಲಾಳ್ ಬಾಗ್, ಕಿರಣ್ ಬುಡ್ಲೆಗುತ್ತು, ಮೀನಾ ಟೆಲಿಸ್, ಅಬ್ದುಲ್ ಸಲೀಂ ಮತ್ತಿತರರು ಉಪಸ್ಥಿತರಿದ್ದರು.