ಬೆಂಗಳೂರು: ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಸ್ವಯಂ ಘೋಷಣೆ ಪತ್ರ ಕಡ್ಡಾಯ ಮಾಡಿರುವುದನ್ನು ಸಡಿಲಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಫಲಾನುಭವಿಗಳು ಪ್ರತಿ ತಿಂಗಳು ನನಗೆ ಇನ್ನೂ ಉದ್ಯೋಗ ದೊರೆತಿಲ್ಲ ಎಂದು ಆನ್ಲೈನಲ್ಲಿ ಸ್ವಯಂ ಘೋಷಣೆ ಮಾಡಿ ಅಪ್ಲೋಡ್ ಮಾಡಬೇಕಿದೆ.
ಇಲ್ಲದಿದ್ದರೆ ಅಂತವರ ಖಾತೆಗೆ ಹಣ ಪಾವತಿಸುವುದಿಲ್ಲ. ಘೋಷಣೆ ಕಡ್ಡಾಯ ಮಾಡಿರುವುದರಿಂದ ಸಾಫ್ಟ್ವೇರ್ ನಲ್ಲಿ ಡಿಬಿಟಿ ಮೂಲಕ ಹಣ ಪಾವತಿ ವಿಳಂಬವಾಗುತ್ತಿದೆ.
ಪ್ರತಿ ತಿಂಗಳ ಬದಲು ಎರಡು ಮೂರು ತಿಂಗಳಿಗೊಮ್ಮೆ ಘೋಷಣಾ ಪತ್ರ ಪಡೆದುಕೊಳ್ಳುವುದು ಉತ್ತಮ ಎನ್ನುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಸೂಚನೆ ನೀಡಿದ್ದಾರೆ.
3,02,373 ಫಲಾನುಭವಿಗಳಿಗೆ 90.68 ಕೋಟಿ ರೂ. ಪಾವತಿಸಲಾಗಿದೆ. ಪತ್ರ ನೀಡದ ಕಾರಣಕ್ಕಾಗಿ 50 ಸಾವಿರ ಮಂದಿಗೆ ಹಣ ಪಾವತಿಯಾಗಿಲ್ಲ. ಯುವನಿಧಿ ಯೋಜನೆಯಡಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ಮತ್ತು ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುವುದು.