November 8, 2025
WhatsApp Image 2024-08-17 at 12.19.06 PM

ಮಂಗಳೂರು: ಸಾಫ್ಟ್ ವೇರ್‌ ಕಂಪೆನಿಗಳಲ್ಲಿ ಉದ್ಯೋಗಕ್ಕೆಂದು ಕಾಂಬೋಡಿಯಾ ದೇಶಕ್ಕೆ ತೆರಳಿ ಅಲ್ಲಿ ಸೈಬರ್‌ ವಂಚಕರ ಜಾಲದಲ್ಲಿ ಸಿಲುಕಿದ್ದ ಭಾರತದ ಸುಮಾರು 250 ಮಂದಿಯನ್ನು ವಿದೇಶಾಂಗ ಇಲಾಖೆ ಪತ್ತೆ ಹಚ್ಚಿ ರಕ್ಷಣೆ ಮಾಡಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಈ ಮೂವರು ಕೆಲ ತಿಂಗಳುಗಳಹಿಂದೆ ಆಂಧ್ರಪ್ರದೇಶದ ಏಜೆಂಟ್‌ ಓರ್ವನ ಮೂಲಕ ಕಾಂಬೋ ಡಿಯಾಕ್ಕೆ ತೆರಳಿದ್ದರು. ಅಲ್ಲಿ ಐಟಿ ಕಂಪೆನಿಯ ಉದ್ಯೋಗದ ನೆಪದಲ್ಲಿ ಅವರನ್ನು ಸೈಬರ್‌ ವಂಚಕರ ಬಳಿ ಉದ್ಯೋಗಕ್ಕೆ ನಿಯೋಜಿಸಲಾಗಿತ್ತು. ಅಲ್ಲಿ ಅವರಿಂದ ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂಗಳಲ್ಲಿ ಹುಡುಗಿಯ ಹೆಸರಿನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸುವುದು, ಷೇರು ಮಾರುಕಟ್ಟೆ, ಕ್ರಿಪ್ಟೋದಲ್ಲಿ ಹೂಡಿಕೆ ನೆಪದಲ್ಲಿ ಭಾರತೀಯರಿಗೆ ಕರೆ ಮಾಡಿ ವಂಚಿಸುವ ಕೆಲಸಗಳನ್ನು ಮಾಡಿಸಲಾಗುತ್ತಿತ್ತು.

“ಏಜೆಂಟ್‌ ಓರ್ವ ಕಾಂಬೋಡಿ ಯಾದಲ್ಲಿ ಐಟಿ ಉದ್ಯೋಗವಿದೆ ಎಂದು ನಂಬಿಸಿ ಟೂರಿಸ್ಟ್‌ ವೀಸಾ ದಲ್ಲಿ ನಮ್ಮನ್ನು ಕಳುಹಿಸಿದ್ದ. ಅಲ್ಲಿ ಹೋದಾಗಲೇ ವಂಚನೆ ಬೆಳಕಿಗೆ ಬಂದಿದ್ದು. ದಿನದ 12 ಗಂಟೆ ಕಾಲ ಗುಲಾಮರಂತೆ ದುಡಿಸಿಕೊಳ್ಳಲಾಗು ತ್ತಿತ್ತು. ದಿನಕ್ಕೆ ಇಷ್ಟು ಲಕ್ಷವನ್ನು ಸಂಗ್ರಹಿಸಿ ಕೊಡುವಂತೆ ಹಿಂಸಿಸಲಾಗುತ್ತಿತ್ತು.ಕೆಲವೊಮ್ಮೆ ಆ ಹಣದಲ್ಲಿ ಸ್ವಲ್ಪ ನೀಡುತ್ತಿದ್ದರು. ಪಾಸ್‌ಪೋರ್ಟ್‌ ಅನ್ನು ತಮ್ಮಲ್ಲೇ ಇಟ್ಟುಕೊಂಡಿದ್ದರು ಎಂದು ವಂಚನೆ ಗೊಳಗಾಗಿ ಭಾರತಕ್ಕೆ ತಲುಪಿರುವ ದಕ್ಷಿಣ ಕನ್ನಡ ಜಿಲ್ಲೆಯ ಸ್ಟೀವನ್‌ ಪೊಲೀಸರಿಗೆ ತಿಳಿಸಿದ್ದಾರೆ.

ಭಾರತೀಯರನ್ನು ವಂಚಿಸಲು ಭಾರತೀಯರ ಬಳಕೆ
ಕಾಂಬೋಡಿಯಾ, ಮಲೇಶ್ಯಾ ಮೊದಲಾದೆಡೆ ಇರುವ ವಂಚಕರು ಭಾರತದ ಯುವಕರನ್ನು ಕರೆಸಿಕೊಂಡು ಅವರನ್ನು ಸೈಬರ್‌ ವಂಚನೆಗೆ ಬಳಸಿಕೊಳ್ಳುತ್ತಾರೆ. ಯಾವ ರೀತಿಯ ಕೆಲಸದಲ್ಲಿ ಹೆಚ್ಚು ಚುರುಕಾಗಿದ್ದಾರೆ ಎಂಬುದನ್ನು ಗುರುತಿಸಿ ಅದೇ ರೀತಿಯ ಹೊಣೆಗಾರಿಕೆ ನೀಡುತ್ತಾರೆ. ಯಾವ ರಾಜ್ಯದ ಭಾಷೆ ತಿಳಿದಿದೆಯೋ ಅದೇ ರಾಜ್ಯದ ಜನರನ್ನು ವಂಚಿಸಲು ಅವರನ್ನು ಬಳಸಲಾಗುತ್ತದೆ. ಇದೇ ರೀತಿ ಕರ್ನಾಟಕದಿಂದ 5 ಮಂದಿ ಯುವಕರು ವಂಚನೆಯ ಜಾಲದಲ್ಲಿ ಸಿಲುಕಿದ್ದು, ಈಗ ರಕ್ಷಿಸಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಅಧಿಕಾರಿಯೋರ್ವರು ವಾಟ್ಸಾಪ್‌ನಲ್ಲಿ ಬಂದಿದ್ದ ಸಂದೇಶವನ್ನು ನಂಬಿ ಹೂಡಿಕೆ ಮಾಡಿ 67 ಲ.ರೂ. ಕಳೆದುಕೊಂಡಿದ್ದರು. ಆ ಬಗ್ಗೆ ಒಡಿಶಾದಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್‌ ಪೊಲೀಸರು ಈ ವಂಚನಾ ಜಾಲದ ಬೆನ್ನು ಹತ್ತಿದಾಗ ಕಾಂಬೋಡಿಯಾದ ವಂಚಕರ ನಂಟು ಬಯಲಿಗೆ ಬಂದಿತು. ತನಿಖೆ ಮುಂದುವರಿಸಿದಾಗ ಇಡೀ ಜಾಲದ ವಿವರ ತಿಳಿಯಿತು. ಈ ಮಾಹಿತಿಯನ್ನು ಪೊಲೀಸರು ಭಾರತೀಯ ವಿದೇಶಾಂಗ ಇಲಾಖೆ ಜತೆ ಹಂಚಿಕೊಂಡರು. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟು 250 ಮಂದಿಯನ್ನು ರಕ್ಷಿಸಿದ್ದಾರೆ.

About The Author

Leave a Reply