ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದ.ಕ.ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿದೆ. ಅವರೊಬ್ಬ ರೌಡಿ ಶೀಟರ್ ತೆರೆಯುವ ಎಲ್ಲಾ ಸಾಧ್ಯತೆಯಿರುವ ಎಂಎಲ್ಎ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.
ಆದರೆ ಅವರ ಮೇಲೆ ಏಕಾಏಕಿ ದಾಳಿ ಮಾಡಲು ಸಾಧ್ಯವಿಲ್ಲ. ಸಂವಿಧಾನದಡಿ, ನ್ಯಾಯಾಲಯದಡಿ ಯಾವ ರೀತಿಯಲ್ಲಿ ಕ್ರಮಕೈಗೊಳ್ಳಲು ಸಾಧ್ಯವೋ ಅದನ್ನು ಮಾಡುತ್ತಿದ್ದೇವೆ. ತನ್ನ ಮೇಲೆ ಯಾವ ಕೇಸ್ ಹಾಕಿದರೂ ಬೇಲ್ ತೆಗೆದುಕೊಳ್ಳುವುದಿಲ್ಲ ಅಂದಿದ್ದ ಹರೀಶ್ ಪೂಂಜಾರನ್ನು ಮಂಡಿಯೂರಿ ಪೊಲೀಸ್ ಠಾಣೆಗೆ ಬರುವಂತೆ ಮಾಡಿದ್ದೇವೆ. ಇದೀಗ ಎಲ್ಲಾ ಕೇಸುಗಳು ಹೈಕೋರ್ಟ್‌ನಲ್ಲಿ 486 ಕ್ವ್ಯಾಷಿಂಗ್ ಆಗುತ್ತಿದೆ. ಬೆಂಗಳೂರಿಗೆ ಎಲ್ಲಾ ಕೇಸುಗಳು ಶಿಫ್ಟ್ ಆಗಿದೆ. ಡಿಸ್ಚಾರ್ಜ್ ಅಪ್ಲಿಕೇಶನ್ ಇನ್ನೂ ಹಾಕಿಲ್ಲ. ವಾರದಲ್ಲಿ ಮೂರು ಸರ್ತಿ ಬೆಂಗಳೂರಿಗೆ ಹೋಗುವ ಪ್ರಯಾಸ ಅವರಿಗಾಗಿದೆ. ಆದ್ದರಿಂದ ನಾನೊಬ್ಬ ವಕೀಲನಾಗಿ ತಾರ್ಕಿಕ ಅಂತ್ಯ ಸಿಗುವವರೆಗೆ ಕಾನೂನು ಹೋರಾಟ ಮಾಡುತ್ತೇನೆ.
ಸರ್ವನಾಶ ಆಗುವಂತೆ ಹರೀಶ್ ಪೂಂಜಾ ಆಣೆ ಪ್ರಮಾಣ ಮಾಡಿರುವ ವಿಚಾರವಾಗಿ ಮಾತನಾಡಿದ ರಕ್ಷಿತ್ ಶಿವರಾಂ, ನಾನು ಆರ್‌ಟಿಐ ದಾಖಲೆಗಳನ್ನು ಇಟ್ಟುಕೊಂಡೇ ಐಬಿಯಲ್ಲಿ 3ಕೋಟಿ ರೂ. ಭ್ರಷ್ಟಾಚಾರ, ಹೈವೇಯಲ್ಲಿ 5ಕೋಟಿ ರೂ. ಭ್ರಷ್ಟಾಚಾರ ನಡೆಸಿದ್ದಾರೆಂದು ಅಧಿಕಾರಿಗಳು ಸೇರಿದಂತೆ ಹರೀಶ್ ಪೂಂಜಾರ ಮೇಲೆ ಆರೋಪ ಮಾಡಿದ್ದೇನೆ. ಆರೋಪ ಸಾಬೀತು ಪಡಿಸಲು ಲೋಕಾಯುಕ್ತಕ್ಕೂ ದೂರು ನೀಡಿದ್ದೇನೆ. ನ್ಯಾಯಾಲಯದ ಮೊರೆಯನ್ನೂ ಹೋಗಿದ್ದೇನೆ. ಸಂವಿಧಾನದ ಅಡಿಯಲ್ಲಿ ಏನು ಸಾಧ್ಯವೋ ಅದನ್ನು ಮಾಡಿದ್ದೇನೆ. ದೇವರನ್ನು ಎಲ್ಲದ್ದಕ್ಕೂ ಮುಂದೆ ನಿಲ್ಲಿಸುವ ಕೆಲಸ ನಾವು ಮಾಡೋಲ್ಲ. ನಮಗೂ ದೇವರ ಮೇಲೆ ನಂಬಿಕೆಯಿದೆ. ಆದರೆ ದೇವರ ಮುಂದೆ ನಮಗೆ ನ್ಯಾಯಕೊಡಿ ಎಂದು ಹೇಳಿದರೆ, ನ್ಯಾಯಾಲಯಕ್ಕೆ ಏನು ಕೆಲಸವಿರುತ್ತದೆ. ಯಾವ ವಿಚಾರಕ್ಕೆ ದೇವರ ಮುಂದೆ ಹೋಗಬೇಕೆನ್ನುವ ಸ್ಪಷ್ಟತೆ ನಮಗಿದೆ. ಆದರೆ ಆ ಸ್ಪಷ್ಟತೆ ಅವರಿಗಿಲ್ಲ ಎಂದರು.