
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿ ಅಕ್ರಮ ಎಸಗಿದ್ದಾರೆಂದು ಆರೋಪಿಸಿ ಶಿಲ್ಪ ಕಲಾವಿದ ಹಾಗೂ ಕ್ರಿಷ್ ಆರ್ಟ್ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಾಂತರ ತಡೆ ನೀಡಿದೆ. ಪ್ರಕರಣದ ಸಂಬಂಧ ಕಾರ್ಕಳ ಟೌನ್ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ಕಾರ್ಕಳ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಕೃಷ್ಣ ನಾಯಕ್ ಸಲ್ಲಿಸಿದ್ದ ಅರ್ಜಿಯು ನ್ಯಾಯ ಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಸ್ವಲ್ಪ ಸಮಯ ಅರ್ಜಿದಾರರ ಪರ ವಕೀಲ ಎಂ. ಅರುಣ್ ಶ್ಯಾಮ್ ಅವರ ವಾದವನ್ನು ಆಲಿಸಿದ ನ್ಯಾಯಪೀಠ ಬಳಿಕ ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಮಧ್ಯಾಂತರ ತಡೆ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿತು.


