ಮೈಸೂರು: ಸರ್ಕಾರಿ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಹಾಲಿನ ಪೌಡರ್, ದಿನಸಿ, ಮೊಟ್ಟೆಗಳನ್ನು ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರೇ ಕದ್ದೊಯ್ಯುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿದೆ. ಅಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡರೂ ಎಚ್ಚೆತ್ತುಕೊಳ್ಳದವರು ಮತ್ತದೇ ತಪ್ಪು ಮುಂದುವರೆಸಿದ್ದಾರೆ.
ಇಲ್ಲೋರ್ವ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಹಾಲಿನ ಪೌಡರ್ ಪ್ಯಾಕೇಟ್ ಗಳನ್ನು ಮನೆಗೆ ಕದ್ದೊಯ್ಯುತ್ತಿದ್ದಾಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶಾಲೆಯಲ್ಲಿದ್ದ ಹತ್ತು ಹಾಲಿನ ಪೌಡರ್ ಪ್ಯಾಕೇಟ್ ಗಳನ್ನು ಕದ್ದೊಯ್ದಿದ್ದು, ರೆಡ್ ಹ್ಯಾಂಡ್ ಆಗಿ ಸ್ಥಳೀಯರಿಗೆ ಸಿಕ್ಕಿ ಬಿದ್ದಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯ ಶಿಕ್ಷಕನನ್ನು ಡಿಡಿಪಿಐ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಅಮಾನತುಗೊಂಡವರು. ಸೋಮವಾರ ಹಾಲಿನ ಪ್ಯಾಕೇಟ್ ಸಮೇತ ಗಣೇಶ್ ಸಿಕ್ಕಿಬಿದ್ದಿದ್ದರು. ಇಂದು ಸಸ್ಪೆಂಡ್ ಆಗಿದ್ದಾರೆ.