Visitors have accessed this post 956 times.
ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಕೊಂದ ಆರೋಪಿ ಇದೀಗ ಉಪವಾಸದ ನಾಟಕವಾಡುತ್ತಿದ್ದಾನೆ. ಬೇಡಿಕೆಗೆ ಒತ್ತಾಯಿಸಿ ಅನ್ನ ನೀರು ಬಿಟ್ಟಿದ್ದಾನೆ. ಮಾನಸಿಕವಾಗಿ ನಾನು ಕುಗ್ಗಿ ಹೋಗಿದ್ದೇನೆ, ಪ್ರಧಾನ ಬ್ಲಾಕ್ ಗೆ ಶಿಫ್ಟ್ ಮಾಡಿ ಅನ್ನೋದು ಆರೋಪಿ ಪ್ರವೀಣ್ ಚೌಗುಲೆಯ ಬೇಡಿಕೆ. ಬೆಂಗಳೂರಿನ ಸೆಂಟ್ರಲ್ ಜೈಲಾಧಿಕಾರಿಗಳಿಗೆ ತಲೆನೋವಾಗಿದ್ದಾನೆ ಪ್ರವೀಣ್ ಚೌಗುಲೆ. ನವೆಂಬರ್ 12, 2022 ರಂದು ಉಡುಪಿಯ ಸಂತೆಕಟ್ಟೆ ಸಮೀಪ ಒಂದೇ ಕುಟುಂಬದ ಅಯ್ನಾಸ್, ಅಫ್ನಾನ್, ಹಸೀನಾ, ಆಸಿಂ ಹತ್ಯೆ ಮಾಡಿದ್ದ. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಯ್ನಾಸ್ ಮೇಲೆ ಅತಿಯಾದ ಮೋಹವಿತ್ತು. ಆಕೆ ಚೌಗುಲೆಯನ್ನು ದೂರಮಾಡಲು ಶುರುಮಾಡಿದಾಗ ಹತ್ಯೆ ಮಾಡಲು ಬಂದಿದ್ದ. ತಡೆಯಲು ಬಂದ ಎಲ್ಲರಿಗೂ ಇರಿದಿದ್ದ. ಇದಾಗಿ ಮಹಜರು ವೇಳೆ ಪ್ರವೀಣ್ ಮೇಲೆ ಹಲ್ಲೆಯತ್ನ ನಡೆಯಿತು. ಆರೋಪಿಯನ್ನು ಹಿರಿಯಡ್ಕ ಸಬ್ ಜೈಲಿನಲ್ಲಿ ಜೀವ ಬೆದರಿಕೆ ಇರುವ ಕಾರಣ ನವೆಂಬರ್ 27- 2023ರಂದು ಉಡುಪಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಆರೋಪಿ ಪ್ರವೀಣ್ ಚೌಗುಲೆ, ಉಡುಪಿಯಲ್ಲಿ ತನಗೆ ಪ್ರಾಣಪಾಯವಿದೆ ಎಂದು ಸಬ್ ಜೈಲಿನಿಂದ ಬೆಂಗಳೂರಿಗೆ ಶಿಫ್ಟ್ ಮಾಡಿಸಿಕೊಂಡಿದ್ದ. ಪ್ರಕರಣದ ವಿಚಾರಣೆಯನ್ನು ಬೆಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಮಾಡಬೇಕು ಎಂದು ಹೈಕೋರ್ಟ್ ಗೆ ವಕೀಲರ ಮೂಲಕ ಅರ್ಜಿ ಹಾಕಿದ್ದ. ಉಡುಪಿ ಕೋರ್ಟ್ ನ ವಿಚಾರಣೆಗೆ ಆರೋಪಿ ತಡೆಯಾಜ್ಞೆಗೆ ಪ್ರಯತ್ನಿಸಿದ್ದ. ಸಂತ್ರಸ್ತ ಕುಟುಂಬ ತಡೆ ಆಜ್ಞೆಯನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯನ್ನು ವಿಚಾರಣೆ ಮಾಡಿರುವ ಹೈಕೋರ್ಟ್ ಆರೋಪಿಯ ಮನವಿಯನ್ನು ತಿರಸ್ಕರಿಸಿದೆ. ಹಿರಿಯಡ್ಕ ಸಬ್ ಜೈಲಿನಲ್ಲಿ ಜೀವಾಪಾಯದ ಆರೋಪ ತಪ್ಪು ಗ್ರಹಿಕೆ ಎಂದು ಕೋರ್ಟ್ ಹೇಳಿದೆ. ಅಗತ್ಯ ಬಿದ್ದರೆ ಸೆಂಟ್ರಲ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ. ಅಮಾಯಕರ ಪ್ರಾಣ ತೆಗೆಯುವಾಗ ಇಲ್ಲದ ಖಿನ್ನತೆ, ಜೀವ ಭಯ ಆರೋಪಿಗೆ ಈಗ ಶುರುವಾಗಿರುವುದು ವಿಪರ್ಯಾಸ.