Visitors have accessed this post 2834 times.

ಸುರತ್ಕಲ್ ಮಸೀದಿ ಕಲ್ಲು ತೂರಾಟ ಪ್ರಕರಣ, ಆರು ಆರೋಪಿಗಳ ಬಂಧನ, ಕಾರು 2 ಬೈಕು ವಶಪಡಿಸಿಕೊಂಡ ಪೊಲೀಸರು..!

Visitors have accessed this post 2834 times.

ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್  ಕಾಟಿಪಳ್ಳ 3ನೇ ಬ್ಲಾಕ್ ನ ಮಸ್ಟಿದುಲ್‌ ಹುದಾ ಜುಮಾ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜೊತೆಗೆ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ಎರಡು ಬೈಕು ಹಾಗೂ ನಾಲ್ಕು ಮೊಬೈಲ್ ಫೋನ್‌ಗಳನ್ನು ಆರೋಪಿಗಳಿಂದ ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಸುರತ್ಕಲ್ ಕಾನ‌ಕಟ್ಲಿಯ ಆಶ್ರಯ ಕಾಲೊನಿ ನಿವಾಸಿ ಭರತ್ ಶೆಟ್ಟಿ (26 ವರ್ಷ), ಚೆನ್ನಪ್ಪ ಶಿವಾನಂದ ಚಲವಾದಿ ಮುತ್ತು (19 ), ಚೇಳಾಯ್ರು ಗ್ರಾಮದ ಖಂಡಿಗೆ ಪಾಡಿ ನಿವಾಸಿ ನಿತಿನ್ ಹಡಪ (22 ), ಮುಂಚೂರು ಗ್ರಾಮದ ಕೊಡಿಪಾಡಿ ನಿವಾಸಿ ಸುಜಿತ್ ಶೆಟ್ಟಿ (23), ಹೊಸಬೆಟ್ಟು ಗ್ರಾಮದ ಈಶ್ವರ ನಗರದ ಅಲ್ಪಪ್ಪ ಅಲಿಯಾಸ್ ಮನು (24) ಹಾಗೂ ಕಾಟಿಪಳ್ಳ ಮೂರನೇ ಬ್ಲಾಕ್ ನಿವಾಸಿ ಪ್ರೀತಮ್ ಶೆಟ್ಟಿ (34 ) ಬಂಧಿತರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಸೀದಿಗೆ ದೀಪಾಲಂಕಾರ ಮಾಡಿದ್ದ ಕಾರ್ಯಕರ್ತರು ಮಸೀದಿಯ ಒಳಗಡೆ ಕೆಲಸ ಮಾಡಿಕೊಂಡಿದ್ದರು. ರಾತ್ರಿ 9.50 ಗಂಟೆಯ ಸುಮಾರಿಗೆ ಜನತಾ ಕಾಲೋನಿಯ ಸ್ಮಶಾನದ ಕಡೆಯಿಂದ ಮಸೀದಿಯ ಹಿಂಭಾಗದ ರಸ್ತೆಯ ಕಡೆಗೆ ಎರಡು ಬೈಕ್‌ಗಳಲ್ಲಿ ಬಂದ ಕಿಡಿಗೇಡಿಗಳು ಮಸೀದಿಯ ಹಿಂಬದಿಯ ಕಿಟಕಿ ಗಾಜುಗಳಿಗೆ ಕಲ್ಲು ಬಿಸಾಡಿದ್ದರು. ಕಿಟಕಿ ಗಾಜುಗಳು ಹಾನಿಗೊಳಗಾಗಿದ್ದವು. ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ದ್ವೇಷವನ್ನು ಉಂಟು ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಲಾಗಿದೆ ಎಂದು ಆರೋಪಿಸಿ ಮಸೀದಿ ಅಧ್ಯಕ್ಷರಾದ ಕೆ.ಎಚ್.ಅಬ್ದುಲ್ ರಹಿಮಾನ್ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ಪತ್ತೆಗೆ ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್ ಅವರು ಸುರತ್ಕಲ್ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ರಾಘವೇಂದ್ರ, ಜನಾರ್ದನ್ ನಾಯ್ಕ ಮತ್ತು ಹೆಡ್ ಕಾನ್‌ಸ್ಟೆಬಲ್ ಉಮೇಶ್ ಕೊಟ್ಟಾರಿ, ಅಣ್ಣಪ್ಪ ವಂಡ್ರೆ, ದಿಲೀಪ್ ರಾಜೇ ಅರಸ್, ಕಾನ್‌ಸ್ಟೆಬಲ್‌ಗಳಾದ ಕಾರ್ತಿಕ್ ಕುಲಾಲ್, ವಿನೋದ್ ಕುಮಾರ್, ಮಂಜುನಾಥ್ ಆಯಟ್ಟಿ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು. ವಿಶೇಷ ತಂಡದ ಪೊಲೀಸರು ಕದ್ರಿ ಮಂಜುನಾಥ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು.

ಆರೋಪಿಯಾದ ಭರತ್ ಶೆಟ್ಟಿ ಈ ಹಿಂದೆಯೂ ಒಟ್ಟು 12 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಇನ್ನೊಬ್ಬ ಆರೋಪಿ ಚೆನ್ನಪ್ಪ ಶಿವಾನಂದ ಚಲವಾದಿ ಅಲಿಯಾಸ್ ಮುತ್ತು ಐದು ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಆರೋಪಿ ನಿತಿನ್ ಹಡಪ ವಿರುದ್ಧ ಈ ಹಿಂದೆಯೂ ಒಂದು ಪ್ರಕರಣ ದಾಖಲಾಗಿತ್ತು. ಆರೋಪಿ ಅಣ್ಣಪ್ಪ ಅಲಿಯಾಸ್ ಮನು ಈ ಹಿಂದೆ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಆರೋಪಿ ಪ್ರೀತಮ್ ಶೆಟ್ಟಿ ಈ ಹಿಂದೆ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *