Visitors have accessed this post 380 times.
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 25ನೇ ಅವಧಿಯ ಮೇಯರ್ ಆಗಿ ಮನೋಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಭಾನುಮತಿ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಎಸ್‌ಸಿ) ಹಾಗೂ ಉಪ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ‘ಎ’ ನಿಗದಿಯಾಗಿತ್ತು. ಬಿಜೆಪಿ ಬಹುಮತ ಹೊಂದಿದ್ದರೂ ವಿರೋಧ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ವಾಡಿಕೆ. ಆದರೆ, ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿ(ಎಸ್‌ಸಿ) ಮೀಸಲು ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ಮೇಯರ್ ಆಗಿ ಮನೋಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮನೋಜ್ ಕುಮಾರ್ 2 ಉಮೇದುವಾರಿಕೆ ಸಲ್ಲಿಸಿದ್ದು, ಎರಡೂ ಸ್ವೀಕೃತಗೊಂಡಿದೆ. ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಭಾನುಮತಿ ಹಾಗೂ ವನಿತಾ ಪ್ರಸಾದ್, ಕಾಂಗ್ರೆಸ್‌ನಿಂದ ಜೀನತ್ ಸಂಶುದ್ದೀನ್ ಸ್ಪರ್ಧಾ ಕಣದಲ್ಲಿದ್ದರು. ಭಾನುಮತಿಯವರು ಎರಡು ಉಮೇದುವಾರಿಕೆ ಸಲ್ಲಿಸಿದ್ದು, ಜಾತಿ ಪ್ರಮಾಣ ಪತ್ರ ಸಲ್ಲಿಸದ ಕಾರಣ ಒಂದು ನಾಮಪತ್ರ ತಿರಸ್ಕೃತಗೊಂಡಿತು. ಚುನಾವಣಾ ಅಧಿಕಾರಿ ಉಮೇದುವಾರಿಕೆ ಹಿಂದೆಗೆದುಕೊಳ್ಳಲು 5 ನಿಮಿಷ ಅವಕಾಶ ನೀಡಿದ್ದು, ವನಿತಾ ಪ್ರಸಾದ್ ನಾಮಪತ್ರ ಹಿಂದೆಗೆದುಕೊಂಡರು. ಈ ಹಿನ್ನೆಲೆಯಲ್ಲಿ ಜೀನತ್ ಸಂಶುದ್ದೀನ್ ಹಾಗೂ ಭಾನುಮತಿಯವರು ಚುನಾವಣಾ ಕಣದಲ್ಲಿದ್ದರು. ಜೀನತ್ ಸಂಶುದ್ದೀನ್ ಪರ 14 ಮತ ಬಿದ್ದರೆ, ಭಾನುಮತಿಯವರಿಗೆ 47 ಮತ ಚಲಾವಣೆಯಾಯಿತು. ಈ ಮೂಲಕ ಭಾನುಮತಿಯವರು ಉಪಮೇಯರ್ ಆಗಿ ಆಯ್ಕೆಯಾದರು. ತೆರಿಗೆ ಹಣಕಾಸು ಸ್ಥಾಯಿ ಸಮಿತಿ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಸೇರಿದಂತೆ ನಾಲ್ಕು ಸ್ಥಾಯಿ ಸಮಿತಿಗೆ ತಲಾ ಏಳೇಳು ಮಂದಿ ಸದಸ್ಯರಂತೆ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ನಡೆದ ವೇಳೆ 65 ಮನಪಾ ಸದಸ್ಯರಲ್ಲಿ 61 ಮಂದಿ ಹಾಜರಿದ್ದು, ಚುನಾವಣೆಯಲ್ಲಿ ಪಾಲ್ಗೊಂಡರು. ಮೈಸೂರು ರೀಜನಲ್ ಕಮಿಷನರ್ ರಮೇಶ್ ಡಿ.ಎಸ್. ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು. ನೂತನವಾಗಿ ಮೇಯರ್, ಉಪ ಮೇಯರ್‌ಗೆ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮನಪಾ ಸದಸ್ಯರು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದರು.