Visitors have accessed this post 296 times.
ಗಂಗೊಳ್ಳಿ: ನಾಪತ್ತೆಯಾಗಿದ್ದ ವೃದ್ಧರೊಬ್ಬರ ಮೃತದೇಹ ರುಂಡವಿಲ್ಲದ ಸ್ಥಿತಿಯಲ್ಲಿ ಗುಜ್ಜಾಡಿ ಗ್ರಾಮದ ಕಳಿಹಿತ್ಲು ಎಂಬಲ್ಲಿ ಪಂಚಗಂಗಾವಳಿ ನದಿ ತೀರದಲ್ಲಿ ಶನಿವಾರ ಪತ್ತೆಯಾಗಿದೆ.
ಗುಡ್ಡಮ್ಮಾಡಿ ಗ್ರಾಮದ ಕರುಣಾಕರ(72) ಮೃತಪಟ್ಟವರು.
ಕರುಣಾಕರ ಅವರು ಸೆ.19ರಂದು ಕೆಂಚನೂರು ಗ್ರಾಮದ ಮಗಳ ಮನೆಯಿಂದ ಗುಡ್ಡಮ್ಮಾಡಿಯ ತಮ್ಮ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ಇವರು ಬೆಳಿಗ್ಗೆ ಮನೆಯಲ್ಲಿ ಇಲ್ಲದೆ ನಾಪತ್ತೆಯಾಗಿದ್ದರು. ಕರುಣಾಕರ ಅವರು ಸೇನಾಪುರ ಗ್ರಾಮದ ಬಂಟ್ವಾಡಿ ಸೇತುವೆಯಿಂದ ನದಿಗೆ ಹಾರಿದ್ದರು ಎನ್ನಲಾಗಿದ್ದು, ಶುಕ್ರವಾರ ಇಡೀ ದಿನ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ಅವರ ಮೃತದೇಹ ರುಂಡವಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಸಂಶಯಕ್ಕೆ ಕಾರಣವಾಗಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕುತ್ತಿಗೆಗೆ ನೇಣು ಬಿಗಿದು ಸೇತುವೆಯಿಂದ ನದಿಗೆ ಜಿಗಿದ ಪರಿಣಾಮ ರುಂಡ ತುಂಡಾಗಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಕರುಣಾಕರ ಅವರು ಹಲವು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗುತ್ತಿದ್ದು, ಮುಂಬೈ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಇದ್ದು ಕಳೆದ 5-6 ತಿಂಗಳ ಹಿಂದಷ್ಟೇ ಊರಿಗೆ ಮರಳಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.