Visitors have accessed this post 425 times.
ದೇಶದ ರಾಜಧಾನಿ ದೆಹಲಿ ಘೋರ ದುರಂತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ವಸಂತ ಕುಂಜ್‌ನ ರಂಗಪುರಿ ಗ್ರಾಮದಲ್ಲಿ ಒಂದೇ ಕುಟುಂಬದ 5 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷ ಸೇವಿಸಿ ವ್ಯಕ್ತಿಯೋರ್ವ ಹಾಗೂ ಆತನ ನಾಲ್ವರು ಪುತ್ರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಕಪಕ್ಕದವರಿಂದ ಮಾಹಿತಿ ಪಡೆದ ಪೊಲೀಸರು ಫ್ಲಾಟ್‌ನ ಬೀಗ ಒಡೆದು ಶವಗಳನ್ನು ಹೊರತೆಗೆದಿದ್ದಾರೆ. ಸದ್ಯ ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ನಾಲ್ವರು ಪುತ್ರಿಯರು ಅಂಗವಿಕಲರು ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ದೆಹಲಿ ಪೊಲೀಸರ ಪ್ರಕಾರ, ತಂದೆ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಅವರಿಗೆ ಕ್ಯಾನ್ಸರ್ ಇತ್ತು. ಅವರ ನಾಲ್ವರು ಹೆಣ್ಣುಮಕ್ಕಳೂ ಅಂಗವಿಕಲರಾಗಿದ್ದು, ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ತನ್ನ ಹೆಂಡತಿಯ ಮರಣದ ನಂತರ ಪತಿ ಚಿಂತಿತನಾಗಿದ್ದನು. ಘಟನಾ ಸ್ಥಳದಿಂದ ಪೊಲೀಸರಿಗೆ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ.
ಕುಟುಂಬಸ್ಥರು ಊರಿಗೆ ಹೋಗಿದ್ದಾರೆ ಎಂದು ಮೊದಲು ನೆರೆಹೊರೆಯವರು ಭಾವಿಸಿದ್ದರು, ಆದರೆ ಮನೆಯಿಂದ ದುರ್ವಾಸನೆ ಬಂದಾಗ ಅನುಮಾನಗೊಂಡರು. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದ್ದಾರೆ. ನಾಲ್ವರು ಪುತ್ರಿಯರು ಹಾಗೂ ತಂದೆಯ ಶವಗಳು ಇಲ್ಲಿ ಪತ್ತೆಯಾಗಿವೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.