18 ವರ್ಷಗಳ ಹಿಂದೆ ಹತ್ಯೆಯಾದ ಪುತ್ರಿಯ ತಲೆಬುರುಡೆ ಸ್ವೀಕರಿಸಿದ ಪೋಷಕರು..!

ಕಾಸರಗೋಡು: ಬರೋಬ್ಬರಿ 18 ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಮನೆ ಮಾಲೀಕನಿಂದ ಹತ್ಯೆಯಾಗಿದ್ದ ಬಾಲಕಿಯ ತಲೆಬುರುಡೆಯನ್ನು ಧಾರ್ಮಿಕ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ಮಾಡಲು ಪೋಷಕರು ಸ್ವೀಕರಿಸಿದ ಘಟನೆ ಕಾಸರಗೋಡು ನ್ಯಾಯಾಲಯದಲ್ಲಿ ನಡೆದಿದೆ. ಗೋವಾದಲ್ಲಿ ಗುತ್ತಿಗೆದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಸರಗೋಡಿನ ಮುಳಿಯಾರ್ ನಿವಾಸಿ ಕೆ.ಸಿ.‌ ಹಂಝ ಮನೆಯಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಅಯ್ಯಂಗೇರಿ ನಿವಾಸಿ ತನ್ನ 13ನೇ ವಯಸ್ಸಿನ ಸಫಿಯಾ ಕೆಲಸಕ್ಕಿದ್ದಳು. ಮನೆಗೆಲಸ ಮಾಡುತ್ತಿದ್ದ ಸಫಿಯಾಳಿಗೆ ಕೆಲಸದ ನಡುವೆ ಸುಟ್ಟ ಗಾಯಗಳಾಗಿತ್ತು. ಈ ವಿಚಾರ ಹೊರಗೆ ತಿಳಿಯುವುದು ಬೇಡವೆಂದು 2008ರ ಡಿಸೆಂಬರ್ ತಿಂಗಳಲ್ಲಿ ಹಂಝಾ ಹಾಗೂ ಆತನ ಪತ್ನಿ ಮೈಮುನಾ ಸಫಿಯಾಳನ್ನು ಕೊಲೆಗೈದು ಹಲವು ತುಂಡುಗಳನ್ನಾಗಿ ಮಾಡಿ ಹೂತು ಹಾಕಿದ್ದರೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿತ್ತು. 2008ರಲ್ಲಿ ಗೋವಾದ ಅಣೆಕಟ್ಟಿನ ಬಳಿ ಈ ಮೂಳೆಗಳು ಪತ್ತೆಯಾಗಿತ್ತು. ಪ್ರಕರಣದ ಒಂದನೇ ಆರೋಪಿ ಹಂಝಾಗೆ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಬಳಿಕ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು. ಚಾರ್ಜ್ ಶೀಟ್‌ನೊಂದಿಗೆ ತಲೆಬುರುಡೆ ಸೇರಿದಂತೆ ದೇಹದ ಭಾಗಗಳನ್ನು ಕ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಪುತ್ರಿಯ ಅಂತ್ಯಸಂಸ್ಕಾರ ಮಾಡಬೇಕೆಂದು ಕೋರಿ ಪೋಷಕರು ಕಳೆದ ತಿಂಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ಶುಕೂರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಾನು ಎಸ್. ಪಣಿಕ್ಕರ್ ಅವರು ಮೃತ ಸಫಿಯಾಳ ದೇಹದ ಭಾಗಗಳನ್ನು ಪೋಷಕರಿಗೆ ಒಪ್ಪಿಸುವಂತೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ ಸಫಿಯಾ ಪೋಷಕರು ಪುತ್ರಿಯ ದೇಹಾವಶೇಷಗಳನ್ನು ಸ್ವೀಕರಿಸಿದರು. ಈ ಸಂದರ್ಭ ಸಫಿಯಾ ಹೆತ್ತವರು ಆಕ್ರಂದನ ಮುಗಿಲು ಮುಟ್ಟಿತ್ತು.

Leave a Reply