ಮಂಗಳೂರು: ಪಡೀಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬಾಕಿ ಇರುವ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಸಹಿತ ವಿವಿಧ ಕಚೇರಿಗಳನ್ನು ಸ್ಥಳಾಂತರ ಮಾಡಿ ಬಳಿಕ ಉದ್ಘಾಟಿಸಲು ಉದ್ದೇಶಿಸ ಲಾಗಿದೆ. ಬಜೆಟ್ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.
ಇಲಾಖಾ ಅನುದಾನ ಬಳಸಿ ಕಚೇರಿ ಕೋಣೆಗಳು ಹೆಚ್ಚು ವಿಸ್ತೀರ್ಣವಾಗಿದ್ದು, ಅವುಗಳಿಗೆ ಬೇಕಾದ ಫರ್ನಿಚರ್, ಒಳಾಂಗಣ ವಿನ್ಯಾಸ ಮೊದಲಾದವುಗಳಿಗೆ ದೊಡ್ಡ ಮೊತ್ತದ ಅನುದಾನ ಅಗತ್ಯವಿದೆ. ಆದ್ದರಿಂದ ಆಯಾ ಇಲಾಖಾ ಕಚೇರಿಯ ಕೊಠಡಿಗಳಿಗೆ ಬೇಕಾದ ಒಳಾಂಗಣ ವಿನ್ಯಾಸವನ್ನು ಇಲಾಖಾ ಅನುದಾನದಲ್ಲೇ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಯವರಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು. ಉಳಿಕೆ ಜಾಗಗಳನ್ನು ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟ ಕಚೇರಿಗಳಿಗೆ ಬಾಡಿಗೆಗೆ ನೀಡುವುದರಿಂದ ಆದಾಯವೂ ದೊರೆಯುುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಯಾವೆಲ್ಲಾ ಇಲಾಖೆಗಳನ್ನು ಸ್ಥಳಾಂತ ರಿಸಬೇಕು ಎನ್ನುವ ಪಟ್ಟಿ ಈಗಾಗಲೇ ಸಿದ್ಧಪಡಿಸಲಾಗಿದ್ದು, ಅದರಂತೆ ಸೂಚನೆ ಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿ’ಸೋಜಾ, ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್ ಕುಮಾರ್, ಮನಪಾ ವಿಪಕ್ಷ ನಾಯಕ ಅನಿಲ್ ಕುಮಾರ್, ಸದಸ್ಯರಾದ ಎಂ. ಶಶಿಧರ ಹೆಗ್ಡೆ, ನವೀನ್ ಡಿ’ಸೋಜಾ, ಪ್ರವೀಣ್‌ಚಂದ್ರ ಆಳ್ವ, ಉಪ ವಿಭಾಗಾಧಿಕಾರಿ ಹರ್ಷವರ್ಧನ್, ಮನಪಾ ಆಯುಕ್ತ ರವಿಚಂದ್ರ ನಾಯಕ್, ಮುಡಾ ಆಯುಕ್ತೆ ನೂರ್ ಝಹರಾ ಖಾನಮ್ ಉಪಸ್ಥಿತರಿದ್ದರು.
ಹಳೆ ಡಿಸಿ ಕಚೇರಿ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಇದಕ್ಕೂ ಮೊದಲು ಸಚಿವರು ಸ್ಟೇಟ್ ಬ್ಯಾಂಕ್ ಬಳಿಯ ಹಳೆಯ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಕೃಷ್ಣ ಬೈರೇಗೌಡ ಅವರು ಪಾರಂಪರಿಕ ಕಟ್ಟಡವಾಗಿ ಉಳಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗುತ್ತಿದೆ. ಸಾಂಸ್ಕೃತಿಕ ಕೇಂದ್ರ ಸಹಿತ ಸಾರ್ವಜನಿಕ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯನ್ನು ರಚಿಸುವಂತೆಯೂ ಸಚಿವರು ಸೂಚಿಸಿದರು.