

ಚಿಕ್ಕಬಳ್ಳಾಪುರ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಆರೋಪದ ಮೇಲೆ ಪತಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತಾತಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಗೌರಿಬಿದನೂರು ಪಟ್ಟಣದ ನಿವಾಸಿ ಪದ್ಮಾ (30) ಎಂದು ಗುರುತಿಸಲಾಗಿದೆ. ಆಕೆಯ ಪತಿ ಚಂದ್ರ (34) ಕೊಲೆ ಆರೋಪಿಯಾಗಿದ್ದಾನೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪದ್ಮಾ ತನ್ನ ತವರು ಮನೆಯಾದ ತಾತಹಳ್ಳಿ ಗ್ರಾಮಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಪತಿ ಚಂದ್ರ ಮಾತನಾಡುವ ನೆಪದಲ್ಲಿ ಆಕೆಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಗ್ರಾಮದ ಹೊರವಲಯದ ತೋಟವೊಂದರಲ್ಲಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅತ್ತೆಗೆ ಕರೆ ಮಾಡಿ ಕೊಲೆ ಮಾಹಿತಿ:

ಕೊಲೆ ಮಾಡಿದ ಬಳಿಕ ಆರೋಪಿ ತನ್ನ ಅತ್ತೆ ನರಸಮ್ಮ ಅವರಿಗೆ ಕರೆ ಮಾಡಿ, “ನಿಮ್ಮ ಮಗಳು ಪದ್ಮಾಳನ್ನು ಕೊಂದಿದ್ದೇನೆ” ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ನಂತರ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಅಲ್ಲದೆ, ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಇನ್ನೊಂದೆಡೆ, ನರಸಮ್ಮ ಅವರು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ದೂರು ದಾಖಲಿಸಿದ್ದಾರೆ.
ಎರಡು ವರ್ಷಗಳಿಂದ ದಾಂಪತ್ಯ ಕಲಹ:
ಘಟನಾ ಸ್ಥಳದ ಪ್ರಾಥಮಿಕ ಪರಿಶೀಲನೆ ವೇಳೆ ಪದ್ಮಾ ಅವರ ಕುತ್ತಿಗೆಯಲ್ಲಿ ಹರಿತವಾದ ಆಯುಧದಿಂದ ಮಾಡಿದ ಆಳವಾದ ಗಾಯ ಪತ್ತೆಯಾಗಿದೆ. ಅಲ್ಲದೆ, ದೇಹದ ಮೇಲೆ ಒಂದು ಅಥವಾ ಎರಡು ಇರಿತದ ಗಾಯಗಳಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತ ಮಹಿಳೆಯ ತಾಯಿ ನೀಡಿರುವ ಮಾಹಿತಿಯ ಪ್ರಕಾರ, ದಂಪತಿ ಕಳೆದ ಎರಡು ವರ್ಷಗಳಿಂದ ದಾಂಪತ್ಯ ಕಲಹ ಎದುರಿಸುತ್ತಿದ್ದರು. ಆದರೆ ಕೊಲೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.






