
ಕುಡುಪು ಮಾಬ್ ಲಿಂಚಿಂಗ್ ಪ್ರಕರಣದ ಕುರಿತು ನ್ಯಾಯಕ್ಕೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿ ಭೇಟಿಯಾದ “ಜಸ್ಟಿಸ್ ಫಾರ್ ಅಶ್ರಫ್ ಯಾಕ್ಷನ್ ಕಮಿಟಿ” ಹಾಗೂ ವಯನಾಡ್ ಸಿಪಿಐಎಂ ನಾಯಕರು.

ಮಂಗಳೂರಿನಲ್ಲಿ ಮತಾಂಧ ಮನಸ್ಥಿತಿಯ ಗುಂಪಿನಿಂದ ಸಾಮೂಹಿಕ ಹಲ್ಲೆಗೊಳಗಾಗಿ ಮೃತ ಪಟ್ಟ ವಯನಾಡ್ ಅಶ್ರಫ್ ಗುಂಪು ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ವಯನಾಡ್ ನಲ್ಲಿ ಹೋರಾಟ ಬಲಗೊಳ್ಳುತ್ತಿದೆ. ಇಂದು (ಮೇ 21, 2025) ಕೇರಳ ಸಿಪಿಐಎಂ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಯನಾಡ್ ಜಿಲ್ಲಾ ಪ್ರವಾಸದಲ್ಲಿ ಇದ್ದರು. ಅವರ ವಯನಾಡ್ ಪ್ರವಾಸ ನಿಗದಿಯಾದ ತಕ್ಷಣವೆ, ಸಿಪಿಐಎಂ ವಯನಾಡ್ ಜಿಲ್ಲಾ ಸಮಿತಿ “ಜಸ್ಟಿಸ್ ಫಾರ್ ಅಶ್ರಫ್ ಯಾಕ್ಷನ್ ಕಮಿಟಿ” ಗೆ ಮುಖ್ಯಮಂತ್ರಿ ಭೇಟಿಗೆ ಸಮಯ ನಿಗದಿಗೊಳಿಸಿತು. ಇಂದು ವಯನಾಡ್ ನಲ್ಲಿ ಸಿಪಿಐಎಂ ಮುಖಂಡರು ಹಾಗೂ ಕಮಿಟಿಯ ಜಂಟಿ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ವಿಸ್ತಾರವಾಗಿ ಪ್ರಕರಣದ ಕುರಿತು ವಿವರಿಸಿತು, ಚರ್ಚಿಸಿತು. ಕರ್ನಾಟಕ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಗಳ ಜೊತೆಗೆ ಮಾತಾಡುವಂತೆ, ನ್ಯಾಯ ಒದಗಿಸಲು ಕಾರ್ಯಪ್ರವೃತ್ತರಾಗುವಂತೆ ವಿನಂತಿಸಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿಯೋಗಕ್ಕೆ ಸಕಾರಾತ್ಮಕ ಸ್ಪಂದನೆಯನ್ನು ನೀಡಿದರು.

ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗದಲ್ಲಿ ಮಾಜಿ ಸಚಿವ, ಹಿರಿಯ ಕಮ್ಯುನಿಸ್ಟ್ ನೇತಾರ ಪಾಲೋಳಿ ಮುಹಮ್ಮದ್ ಕುಟ್ಟಿ, ಸಿಪಿಐಎಂ ವಯನಾಡ್ ಜಿಲ್ಲಾ ನಾಯಕರುಗಳಾದ ಅಹಮ್ಮದ್ ಮಟ್ಟಿ, ಅಡ್ವಕೇಟ್ ಜಯಕೃಷ್ಣನ್, ಯಾಕ್ಷನ್ ಕಮಿಟಿಯ ನಝರ್ ಪರಪ್ಪೂರ್, ನಾಸರ್ ಕಪ್ಪನ್, ರಹೀಮ್ ಕೆ ಕೆ, ಅಬ್ದುಲ್ ಹಖ್ ಉಪಸ್ಥಿತರಿದ್ದರು.

ಈಗ ಇರುವ ಪ್ರಶ್ನೆ, ಕರ್ನಾಟಕ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿನಗಳ ಹಿಂದೆ ಗುಂಪು ಹತ್ಯೆ ನಡೆದ ಮಂಗಳೂರು ಜಿಲ್ಲಾ ಪ್ರವಾಸದಲ್ಲಿದ್ದರು. ಆ ಸಂದರ್ಭ ಗುಂಪು ಹತ್ಯೆಗೆ ಬಲಿಯಾದ ಅಶ್ರಫ್ ಗೆ ನ್ಯಾಯ ದೊರಕಬೇಕು, ಮಂಗಳೂರು ಪೊಲೀಸರು ಪ್ರಕರಣವನ್ನು ತೇಲಿಸುತ್ತಿದ್ದಾರೆ ಎಂಬ ಆಕ್ರೋಶ ಬಲವಾಗಿತ್ತು. ಆದರೆ, ಈ ಕುರಿತು ಗಮನ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿಗೆ ಸಮಯ ನಿಗದಿಗೊಳಿಸಲು ಜಿಲ್ಲೆಯ ಕಾಂಗ್ರೆಸ್ ಪಕ್ಷ ಪ್ರಯತ್ನಿಸದಿರುವುದು ಯಾಕೆ ? ಕನಿಷ್ಟ ಒಂದು ಮನವಿ ಪತ್ರವನ್ನು ಸಲ್ಲಿಸಲೂ ಪ್ರಯತ್ನಿಸದಿರುವುದು ಯಾವ ಸಂದೇಶ ನೀಡುತ್ತದೆ.
ಕೇರಳದ ವಯನಾಡ್ ನ ಸಿಪಿಐಎಂ ಪಕ್ಷಕ್ಕೆ ಸಾಧ್ಯವಾಗುವುದು, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕತ್ವಕ್ಕೆ ಯಾಕೆ ಸಾಧ್ಯವಾಗುವುದಿಲ್ಲ ? ಈಗಂತೂ ಕಾಂಗ್ರೆಸ್ ಪಕ್ಷದ ಯಾವೊಬ್ಬ ಜಿಲ್ಲಾ ನಾಯಕನೂ ಅಶ್ರಫ್ ಗುಂಪು ಹತ್ಯೆ ಪ್ರಕರಣದ ಕುರಿತು ತುಟಿ ಬಿಚ್ಚುತ್ತಿಲ್ಲ. ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರಷ್ಟೆ ಸ್ಪೀಕರ್ ಬಳಿ, ಉಸ್ತುವಾರಿ ಸಚಿವರ ಬಳಿ ನ್ಯಾಯಕ್ಕಾಗಿ ಅಗ್ರಹಿಸಿ ಮನವಿ ಪತ್ರ ಹಿಡಿದು ಓಡಾಡುತ್ತಿದ್ದಾರೆ. ಈ ನಾಯಕರ ಅಸಹಾಯಕತೆ ಎದ್ದು ಕಾಣುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕುಡುಪು ಮಾಬ್ ಲಿಂಚಿಂಗ್ ಪ್ರಕರಣದಲ್ಲಿ ನ್ಯಾಯ ದೊರಕಲು ಸಾಧ್ಯವೆ ? ಪ್ರಕರಣ ದುರ್ಬಲಗೊಳ್ಳುತ್ತಾ ಹಾಗೆಯೆ ಮುಚ್ಚಿ ಹೋಗುವುದರ ಕುರಿತು ಯಾರಿಗಾದರು ಅನುಮಾನ ಇದೆಯೆ, ಇದೆಲ್ಲದರ ಅರ್ಥ ಏನು ಎಂದು ಕಾಂಗ್ರೆಸ್ ಪಕ್ಷ ವಿವರಿಸುತ್ತದೆಯೆ ?
ಮುನೀರ್ ಕಾಟಿಪಳ್ಳ