

ಮಂಗಳೂರು:ಬಂಟ್ವಾಳ ತಾಲ್ಲೂಕಿನ ಕುರಿಯಾಳ ಗ್ರಾಮದ ಇರಾಕೋಡಿಯಲ್ಲಿ ಈಚೆಗೆ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ.
ಶೃಂಗೇರಿ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ ನಿವಾಸಿ ರವಿ ಸಂಜಯ್ (29) ಬಂಧಿತ ಆರೋಪಿ.

ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬದುಲ್ ರಹಿಮಾನ್ ಹತ್ಯೆ ಪ್ರಕರಣ ಸಂಬಂಧ ಬಂಟ್ವಾಳ ತಾಲ್ಲೂಕಿನ ಕುರಿಯಾಳ ಗ್ರಾಮದ ಮುಂಡರಕೋಡಿ ಮನೆಯ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿ ನಗರ ಭದ್ರಕಾಳಿ ದೇವಸ್ಥಾನ ಬಳಿಯ ನಿವಾಸಿ ಪೃಥ್ವಿರಾಜ್ (21) ಹಾಗೂ ಬಂಟ್ವಾಳದ ನಿವಾಸಿ ಚಿಂತನ್ (19), ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27), ಅಭಿನ್ ರೈ (32) ಹಾಗೂ ಬಡಗಬೆಳ್ಳೂರು ಗ್ರಾಮದ ತೇಜಾಕ್ಷ (24) ಮತ್ತು ರವಿರಾಜ್ (23) ಎಂಬುವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಅವರನ್ನು ಇರಾಕೋಡಿಯಲ್ಲಿ ಮೇ 27ರಂದು ಹತ್ಯೆ ಮಾಡಲಾಗಿತ್ತು. ಅವರ ಜೊತೆಗಿದ್ದ ಕಲಂದರ್ ಶಾಫಿ ಎಂಬವರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.






