

ಬಂಟ್ವಾಳ: ಪುರ ಸಭೆಯ ಮಾಜಿ ಉಪಾಧ್ಯಕ್ಷ, ನಿಕಟಪೂರ್ವ ಸದಸ್ಯ 66 ವರ್ಷ ಪ್ರಾಯದ ಮುಹಮ್ಮದ್ ನಂದರಬೆಟ್ಟು ಅವರು ಅನಾರೋಗ್ಯದಿಂದ ಸೋಮವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನಂದರಬೆಟ್ಟು ಅನ್ಸಾರಿಯಾ ಇಸ್ಲಾಮಿಕ್ ಮದರಸ ಮತ್ತು ಮದೀನಾ ಜುಮಾ ಮಸೀದಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು 16 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ಥಳೀಯವಾಗಿ ಹಲವು ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದರು. ಕಾಲೇಜು ಹಂತದಲ್ಲಿ ಉತ್ತಮ ವಾಲಿಬಾಲ್ ಪಟುವಾಗಿದ್ದ ಅವರು ರಾಷ್ಟ್ರೀಯ ಮಟ್ಟದ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಮುಹಮ್ಮದ್ ನಂದರಬೆಟ್ಟು ಅವರ ಅಗಲಿಕೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವು ಮಂದಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.







