

ಬಂಟ್ವಾಳ: ರಂಗಭೂಮಿ ಕಲಾವಿದರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ಸಂಭವಿಸಿದೆ. ಉಳ್ಳಾಲ ತಾಲೂಕಿನ ಇರಾ ಗ್ರಾಮದ ಪಾತ್ರಾಡಿ ನಿವಾಸಿ 40 ವರ್ಷ ಪ್ರಾಯದ ಮಿಥುನ್ ಪೂಜಾರಿ ಮಂಚಿ ಮೃತ ಕಲಾವಿದರು.
ಮೃತರು ಪತ್ನಿ ಮತ್ತು ಎರಡು ವರ್ಷದ ಮಗುವನ್ನು ಅಗಲಿದ್ದಾರೆ. ಸ್ಥಳೀಯವಾಗಿ ಕೆಲವು ನಾಟಕ ತಂಡಗಳಲ್ಲಿ ಕಲಾವಿದನಾಗಿ ಅವರು ಅಭಿನಯಿಸಿದ್ದರು. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಅವರು ಮಂಚಿ ಸಮೀಪದಲ್ಲಿದ್ದ ಹಳೆಯ ಮನೆಗೆ ತೆರಳಿ ತೋಟಕ್ಕೆ ನೀರು ಬಿಡುವ ಕೆಲಸ ಕೆಲವೊಮ್ಮೆ ಮಾಡುತ್ತಿದ್ದರು. ಇರಾದಲ್ಲಿ ಹೊಸ ಮನೆ ನಿರ್ಮಿಸಿದ ಬಳಿಕ ಹಳೆಯ ಮನೆಯಲ್ಲಿ ಯಾರೂ ವಾಸವಾಗಿಲ್ಲ. ಅದರಂತೆ ಸೋಮವಾರ ಬೆಳಗ್ಗೆ ಮಂಚಿಯ ಹಳೆ ಮನೆಗೆ ಹೋದವರು ಸಂಜೆಯವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ಅನುಮಾನಗೊಂಡು ಸ್ಥಳೀಯರು ಗಮನಿಸಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







