April 24, 2026
WhatsApp Image 2026-04-24 at 4.30.52 PM

ಮೈಸೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಪ್ರಕರಣದ ಬೆನ್ನಲ್ಲೇ, ಇದೀಗ ಮೈಸೂರಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ನಗರದ ಪ್ರತಿಷ್ಠಿತ ಚೆಲುವಾಂಬ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶುವೊಂದು ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಹಸುಳೆಯ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಇರುವೆ ಕಚ್ಚಿ ಮೃತಪಟ್ಟ ಮಗು
ಮಾಹಿತಿಗಳ ಪ್ರಕಾರ, ಏಪ್ರಿಲ್ 15ರಂದು ಅವಧಿ ಪೂರ್ವ ಅಂದರೆ ಕೇವಲ 7 ತಿಂಗಳಿಗೆ ಮಗು ಜನಿಸಿತ್ತು. ಹುಟ್ಟಿದಾಗ ಮಗು ಕೇವಲ 1 ಕೆಜಿ 40 ಗ್ರಾಂ ತೂಕವಿದ್ದ ಕಾರಣ, ಅದಕ್ಕೆ ವಿಶೇಷ ಚಿಕಿತ್ಸೆ ನೀಡಲು ಐಸಿಯುವಿನಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಐಸಿಯು ವಾರ್ಡ್‌ನಲ್ಲಿ ವಿಪರೀತ ಇರುವೆಗಳಿದ್ದವು ಎಂದು ಪೋಷಕರು ಆರೋಪಿಸಿದ್ದಾರೆ. “ವಾರ್ಡ್‌ನಲ್ಲಿ ಇರುವೆಗಳ ಕಾಟ ಹೆಚ್ಚಿದೆ ಎಂದು ಮೊದಲೇ ವೈದ್ಯರು ಮತ್ತು ಸಿಬ್ಬಂದಿಗೆ ತಿಳಿಸಿದ್ದೆವು. ಆದರೆ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ, ಸಿಹಿಯಾದ ವಸ್ತುಗಳ ಕಾರಣಕ್ಕೆ ಒಂದೆರಡು ಇರುವೆಗಳು ಬಂದಿರಬಹುದು ಎಂದು ಸಮಜಾಯಿಷಿ ನೀಡಿದ್ದರು. ಈಗ ನಮ್ಮ ಮಗುವನ್ನೇ ಕಳೆದುಕೊಂಡಿದ್ದೇವೆ” ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ಆರೋಪ ತಳ್ಳಿ ಹಾಕಿದ ಆಸ್ಪತ್ರೆ
ಈ ಆರೋಪಗಳನ್ನು ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ತಳ್ಳಿಹಾಕಿದ್ದಾರೆ. ಮಗು ಜನಿಸಿದಾಗ ತೀರಾ ಕಡಿಮೆ ತೂಕವಿದ್ದ ಕಾರಣ ಅದರ ಸ್ಥಿತಿ ಗಂಭೀರವಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡುವಾಗ ಮಗು ಅಲುಗಾಡಬಾರದು ಎಂಬ ಕಾರಣಕ್ಕೆ ಕೈ ಮತ್ತು ಬಾಯಿಗೆ ಪ್ಲಾಸ್ಟರ್ ಹಾಕಲಾಗಿತ್ತು. ಆ ಭಾಗದಲ್ಲಿ ಉಂಟಾಗಿರುವ ಗುರುತುಗಳು ಪ್ಲಾಸ್ಟರ್‌ನಿಂದ ಆಗಿರಬಹುದೇ ಹೊರತು ಇರುವೆ ಕಚ್ಚಿದ್ದರಿಂದಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

“ನಮ್ಮ ಸಿಬ್ಬಂದಿಗಳಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ. ಕಳೆದ ಒಂದು ವಾರದಿಂದ ಮಗುವನ್ನು ಉಳಿಸಲು ನಾವು ಹರಸಾಹಸ ಪಟ್ಟಿದ್ದೇವೆ. ಐಸಿಯುವಿನಲ್ಲಿ ಗ್ಲೂಕೋಸ್ ಇರುವುದರಿಂದ ಅಲ್ಪಸ್ವಲ್ಪ ಇರುವೆಗಳು ಇರಬಹುದು, ಆದರೆ ಅವು ಮಗುವಿನ ಸಾವಿಗೆ ಕಾರಣವಾಗಿಲ್ಲ” ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಮಗುವಿನ ಸಾವಿನಿಂದ ಪೋಷಕರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದು, ಘಟನೆಯು ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ

About The Author

Leave a Reply