

ಮುಂಬೈ : ಕಳೆದ ವಾರ ಮುಂಬೈನಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಕಲ್ಲಂಗಡಿ ಹಣ್ಣು ಸೇವನೆ ಕಾರಣವಲ್ಲ ಎಂಬ ಆಘಾತಕಾರಿ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಮೊಬೈಲ್ ಬಿಡಿಭಾಗಗಳ ವ್ಯಾಪಾರಿ ಅಬ್ದುಲ್ಲ ದಕೋಡಿಯಾ ಕುಟುಂಬದ ಸದಸ್ಯರ ಸಾವಿಗೆ ತೀವ್ರ ವಿಷಪೂರಿತ ಅಂಶ ದೇಹ ಸೇರಿರುವುದೇ ಕಾರಣ ಎಂದು ವೈದ್ಯರು ಶಂಕಿಸಿದ್ದಾರೆ.
ಮೃತರ ಮೆದುಳು, ಹೃದಯ ಮತ್ತು ಕರುಳು ಸೇರಿದಂತೆ ಪ್ರಮುಖ ಅಂಗಾಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ವೈದ್ಯರನ್ನು ದಂಗಾಗಿಸಿದೆ. ಇದಲ್ಲದೆ, ಅಬ್ದುಲ್ಲ ಅವರ ದೇಹದಲ್ಲಿ ಪ್ರಬಲ ನೋವು ನಿವಾರಕ ‘ಮಾರ್ಫಿನ್’ ಅಂಶ ಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಘಟನೆ ನಡೆದ ರಾತ್ರಿ ಸಂಬಂಧಿಕರೊಂದಿಗೆ ಮಟನ್ ಬಿರಿಯಾನಿ ಸೇವಿಸಿದ್ದ ಈ ಕುಟುಂಬ, ನಂತರ ಕಲ್ಲಂಗಡಿ ಹಣ್ಣು ತಿಂದಿತ್ತು. ಆದರೆ ಅದೇ ಬಿರಿಯಾನಿ ತಿಂದ ಸಂಬಂಧಿಕರು ಆರೋಗ್ಯವಾಗಿದ್ದಾರೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಇಲಾಖೆಯು ಕಲ್ಲಂಗಡಿ ಹಣ್ಣಿಗೂ ಈ ಸಾವಿಗೂ ಸಂಬಂಧವಿಲ್ಲ ಎಂದು ಪ್ರಾಥಮಿಕವಾಗಿ ಸ್ಪಷ್ಟಪಡಿಸಿದೆ.
ಪೊಲೀಸರು ಈಗ ಈ ಸಾವಿನ ಹಿಂದೆ ಯಾವುದಾದರೂ ಪಿತೂರಿ ಅಥವಾ ಮಾನಸಿಕ ಒತ್ತಡವಿದೆಯೇ ಎಂಬ ಆಯಾಮದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

ಆಹಾರದಲ್ಲಿ ಸಾಮಾನ್ಯವಾಗಿ ಕಲಬೆರಕೆಗೆ ಬಳಸುವ ರಾಸಾಯನಿಕಗಳಿದೆಯೇ ಎಂಬುದನ್ನು ಪರೀಕ್ಷೆಗಳು ತಿಳಿಸುತ್ತವೆ ಎಂದು ಎಫ್‌ಡಿಎ ಅಧಿಕಾರಿಗಳು ಹೇಳಿದ್ದಾರೆ. ಕಲ್ಲಂಗಡಿಯಲ್ಲಿ ಕೃತಕ ಬಣ್ಣ ಅಥವಾ ಸಿಹಿಕಾರಕ ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತರೆ ಎಲ್ಲಾ ಆಹಾರ ಮಾದರಿಗಳು ಗುಣಮಟ್ಟದವಾಗಿವೆ ಎಂದು ವರದಿ ಹೇಳಿದೆ. ನೀರಿನ ಮಾದರಿಗಳ ಫಲಿತಾಂಶ ಸ್ಪಷ್ಟವಾಗಿಲ್ಲ; ಪ್ರಮಾಣ ಕಡಿಮೆ ಇದ್ದುದರಿಂದ ಸಂಪೂರ್ಣ ಪರೀಕ್ಷೆ ಸಾಧ್ಯವಾಗಿಲ್ಲ. ಮಾಂಸದ ಮಾದರಿಯನ್ನು ಪ್ರೋಟೀನ್ ವಿಶ್ಲೇಷಣೆಗೆ ಬಿಎಂಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸಾವುಗಳ ನಿಖರ ಕಾರಣ ವಿಧಿವಿಜ್ಞಾನ ವರದಿಯಲ್ಲಿ ತಿಳಿಯುವ ನಿರೀಕ್ಷೆಯಿದೆ. ಆಹಾರ ಮಾದರಿಗಳನ್ನು ವಿಧಿವಿಜ್ಞಾನ ತಂಡ ಹಾಗೂ ಎಫ್‌ಡಿಎಗೆ ವಿಂಗಡಿಸಲಾಗಿದೆ. ಈ ಮಾದರಿಗಳಲ್ಲಿ ಸೋಂಕು ಅಥವಾ ವಿಷಾಂಶಗಳಿಗಾಗಿ ಪರಿಶೀಲನೆ ನಡೆಯುತ್ತಿದೆ. ಸಂಗ್ರಹಿಸಿದ ಮಾದರಿಗಳಲ್ಲಿ ಹಣ್ಣು, ಅರ್ಧ ತಿಂದ ಖರ್ಜೂರ, ದಾಲ್ಚಿನ್ನಿ ಪುಡಿ ಮಿಶ್ರಿತ ನೀರು ಸೇರಿವೆ. ಜೊತೆಗೆ ಪಲಾವ್–ಬಿರಿಯಾನಿ, ಹಸಿ ಅಕ್ಕಿ ಮತ್ತು ಮಸಾಲೆಗಳನ್ನೂ ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಮೃತರನ್ನು ಅಬ್ದುಲ್ಲಾ ಡೋಕಾಡಿಯಾ (44), ಅವರ ಪತ್ನಿ ನಸ್ರೀನ್ (35), ಪುತ್ರಿಯರಾದ ಆಯೇಷಾ (16) ಮತ್ತು ಜೈನಾಬ್ (12) ಎಂದು ಗುರುತಿಸಲಾಗಿದೆ. ಮೃತರ ಒಳಾಂಗಗಳು ಮತ್ತು ಹೊಟ್ಟೆಯಿಂದ ಪಡೆದ ಮಾದರಿಗಳನ್ನು ಕಲಿನಾ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
“ಪರೀಕ್ಷೆಗಳ ಫಲಿತಾಂಶಗಳನ್ನು ವಿವಿಧ ವಿಷಗಳ ಮಾಹಿತಿಯೊಂದಿಗೆ ಹೋಲಿಸಿ ಪರಿಶೀಲಿಸಲಾಗುತ್ತದೆ”, ಎಂದು ಹಿರಿಯ ವಿಧಿವಿಜ್ಞಾನ ತಜ್ಞರು ತಿಳಿಸಿದ್ದಾರೆ.






