May 6, 2026
WhatsApp Image 2026-05-06 at 1.52.32 PM

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ನಕಲಿ ವಿವಾಹಗಳ ಮೂಲಕ ಹಣ ಮತ್ತು ಆಭರಣ ದೋಚುತ್ತಿದ್ದ ಶಂಕಿತ ವಧುವಿನ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮಹಿಳೆಯೊಬ್ಬರು ಏಜೆಂಟ್‌ಗಳ ಸಹಾಯದಿಂದ ಹಲವು ಪುರುಷರನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದ ಆರೋಪ ಕೇಳಿಬಂದಿದೆ.

ಯೋಗೇಶ್ ಶಿಂಧೆ ಎಂಬ ಮಧ್ಯವರ್ತಿಗಳ ಮೂಲಕ ಈ ಮಹಿಳೆಯನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದರು. ಏಜೆಂಟರು ಮದುವೆ ಏರ್ಪಡಿಸಲು ಅವರಿಂದ ದೊಡ್ಡ ಮೊತ್ತದ ಹಣ ಪಡೆದಿದ್ದರು. ಶಾಸ್ತ್ರೋಕ್ತವಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ವಧು ಮತ್ತು ಏಜೆಂಟರು ಕಣ್ಮರೆಯಾದಾಗ ವಂಚನೆಯ ಅಸಲಿ ಮುಖವಾಡ ಕಳಚಿದೆ. ನಂತರದ ವಿಚಾರಣೆಯಲ್ಲಿ ಯೋಗೇಶ್‌ಗೆ ಬೆಚ್ಚಿಬೀಳಿಸುವ ಸತ್ಯವೊಂದು ತಿಳಿದುಬಂದಿದೆ.

ಈ ಮಹಿಳೆ ತನಗಿಂತ ಮೊದಲು ಈಗಾಗಲೇ ಎಂಟು ಪುರುಷರನ್ನು ಇದೇ ರೀತಿ ಮದುವೆಯಾಗಿದ್ದು, ಪ್ರತಿ ಬಾರಿಯೂ ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಳು. ಮದುವೆಗೆ ಮುನ್ನ ಆಕೆಯ ಹಿಂದಿನ ವಿವಾಹಗಳ ಬಗ್ಗೆ ಯೋಗೇಶ್‌ರನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿ ಇಡಲಾಗಿತ್ತು.

ತೀವ್ರ ಮಾನಸಿಕ ಅಘಾತಕ್ಕೊಳಗಾದ ಯೋಗೇಶ್  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ತಮಗೆ ನ್ಯಾಯ ಬೇಕೆಂದು ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ವಂಚನೆಯಿಂದ ನಾನು ಆತ್ಮಹತ್ಯೆಯ ಆಲೋಚನೆಯಲ್ಲಿದ್ದೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಚಕ್ಲಾಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜಾಲದ ಇತರ ಸದಸ್ಯರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲೆಯಾದ್ಯಂತ ಈ ಘಟನೆ ಭಾರೀ ಆತಂಕ ಮೂಡಿಸಿದ್ದು, ಇನ್ನು ಎಷ್ಟು ಮಂದಿ ಇವರ ಜಾಲಕ್ಕೆ ಬಲಿಯಾಗಿದ್ದಾರೆ ಎಂಬ ಸತ್ಯ ತನಿಖೆಯಿಂದ ಹೊರಬರಬೇಕಿದೆ.

About The Author

Leave a Reply