

ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಬಿಕ್ರೋಡಿಯಲ್ಲಿ ವಾಸವಾಗಿರುವ ನಳಿನಿ ಮತ್ತು ರವೀಂದ್ರ ದಂಪತಿಯ ಮಗಳು ಲವ್ಯ ಎಂಬ ಪುಟ್ಟ ಬಾಲಕಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಹಿಪ್ ಜಾಯಿಂಟ್‌ಗೆ ಸಂಬಂಧಿಸಿದ ಕಾಯಿಲೆಯಿಂದಾಗಿ ನಡೆಯಲು ಸಾಧ್ಯವಾಗದೆ ಸಂಕಷ್ಟದ ಜೀವನ ನಡೆಸುತ್ತಿದ್ದಾಳೆ.

ಮಗಳ ಆರೋಗ್ಯ ಸುಧಾರಿಸಬಹುದು ಎಂಬ ಆಶಯದಿಂದ ಪೋಷಕರು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಇಂಗ್ಲಿಷ್ ಔಷಧಿ, ಆಯುರ್ವೇದ ಚಿಕಿತ್ಸೆ ಸೇರಿದಂತೆ ವಿವಿಧ ರೀತಿಯ ಚಿಕಿತ್ಸೆಗಳ ಮೊರೆ ಹೋದರೂ ಯಾವುದೇ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಮಂಗಳೂರಿನ ತೇಜಸ್ವಿನಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಕೊಡಿಸಿದರೂ ಲವ್ಯಳ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಸದ್ಯ ವೈದ್ಯರ ಸಲಹೆಯಂತೆ ಲವ್ಯಳ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ. ಇದಕ್ಕೆ ಅಂದಾಜು 3ರಿಂದ 4 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸುವುದು ಅಸಾಧ್ಯವಾಗಿದೆ. ಮಗಳ ನೋವನ್ನು ನೋಡಲಾಗದೆ ಪೋಷಕರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಇಂದು ಇತರ ಮಕ್ಕಳಂತೆ ಓಡಾಡಿ, ಆಟವಾಡಿ, ನಲಿಯಬೇಕಾದ ವಯಸ್ಸಿನಲ್ಲಿ ಲವ್ಯ ನಡೆಯಲೂ ಸಾಧ್ಯವಾಗದೆ ನೋವಿನ ಜೀವನ ನಡೆಸುತ್ತಿದ್ದಾಳೆ.
ನಿಮ್ಮ ಒಂದು ಸಣ್ಣ ಸಹಾಯ ಆ ಪುಟ್ಟ ಬಾಲಕಿಯ ಬದುಕಿನಲ್ಲಿ ದೊಡ್ಡ ಬದಲಾವಣೆ ತರಬಹುದು.

ಮಾನವೀಯತೆಯ ದೃಷ್ಟಿಯಿಂದ ಲವ್ಯಳನ್ನು ನಿಮ್ಮ ಮನೆಯ ಮಗಳಂತೆ ಭಾವಿಸಿ, ಆಕೆಯ ಶಸ್ತ್ರಚಿಕಿತ್ಸೆಗೆ ಕೈಲಾದ ಆರ್ಥಿಕ ನೆರವು ನೀಡುವ ಮೂಲಕ ಸಹಕರಿಸಿ. ನಿಮ್ಮೆಲ್ಲರ ಸಹಕಾರದಿಂದ ಲವ್ಯ ಮತ್ತೆ ತನ್ನ ಕಾಲ ಮೇಲೆ ನಿಂತು ನಡೆಯುವಂತಾಗಲಿ ಎಂಬುದೇ ಕುಟುಂಬದ ಆಶಯ.
ಬನ್ನಿ, ಪುಟ್ಟ ಬಾಲಕಿಯ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿಸೋಣ.
ಲವ್ಯಳ ಚಿಕಿತ್ಸೆಗೆ ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ ಪೋಷಕರು.






