

ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನ ಮೇರೆಗೆ ಕರಾವಳಿ ಪ್ರಾಧಿಕಾರ ಹಾಗೂ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಕೊಳ್ನಾಡು ಗ್ರಾಮದ ಕುಳಾಲು–ಬಂಡಮುಗೇರ್ ಭಾಗದ ಬಹು ಉದ್ದದ ಡಾಮಾರು ರಸ್ತೆಯನ್ನು ಪುನರ್ ಕಾಂಕ್ರೀಟೀಕರಣಗೊಳಿಸಿ ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಯಿತು. ವರ್ಷಗಳ ಕಾಲ ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿದ್ದ ಸ್ಥಳೀಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಈ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ಈ ರಸ್ತೆ ಅಭಿವೃದ್ಧಿ ಕಾರ್ಯವು ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ನಿರಂತರ ಮನವಿಗೆ ಸ್ಪಂದಿಸಿ ಶಾಸಕ ಮಂಜುನಾಥ ಭಂಡಾರಿಯವರ ಮೂಲಕ ನೆರವೇರಿದೆ. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾಗಿಯೂ, ಕೊಳ್ನಾಡು ಗ್ರಾಮ ಪಂಚಾಯತ್‌ನ ಸುದೀರ್ಘ ಅವಧಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಸುಭಾಶ್ಚಂದ್ರ ಶೆಟ್ಟಿಯವರ ಪ್ರಯತ್ನದಿಂದ ಈ ಭಾಗಕ್ಕೆ ಮತ್ತೊಂದು ಮಹತ್ವದ ಅಭಿವೃದ್ಧಿ ಯೋಜನೆ ದೊರೆತಂತಾಗಿದೆ.


ರಸ್ತೆ ಉದ್ಘಾಟನೆ ಕಾರ್ಯಕ್ರಮವನ್ನು ಸಾರ್ವಜನಿಕರ ಸಂಭ್ರಮದ ನಡುವೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುಭಾಶ್ಚಂದ್ರ ಶೆಟ್ಟಿಯವರು, “ಇಂದು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಕುಳಾಲು ಒಂದು ಕಾಲದಲ್ಲಿ ಸಂಪೂರ್ಣ ಕುಗ್ರಾಮವಾಗಿತ್ತು. ಸರಿಯಾದ ರಸ್ತೆಗಳೇ ಇಲ್ಲದೆ ಜನರು ಕಾಲುದಾರಿಗಳಲ್ಲೇ ಸಂಚರಿಸುತ್ತಿದ್ದ ದಿನಗಳನ್ನು ನಾವು ಕಂಡಿದ್ದೇವೆ,” ಎಂದು ಭಾವುಕರಾಗಿ ಹಳೆಯ ನೆನಪುಗಳನ್ನು ಹಂಚಿಕೊಂಡರು.
“ಆ ಕಾಲದಲ್ಲಿ ಗ್ರಾಮದ ಹಿರಿಯರು ಸ್ವಂತ ಜಮೀನುಗಳನ್ನು ರಸ್ತೆ ನಿರ್ಮಾಣಕ್ಕೆ ದಾನವಾಗಿ ನೀಡಿದುದೂ, ಹಲವರು ತಮ್ಮ ಮಟ್ಟಿಗೆ ಆರ್ಥಿಕ ಸಹಾಯ ಮಾಡಿದುದೂ ಈ ಭಾಗದ ಅಭಿವೃದ್ಧಿಗೆ ಬಲವಾಯಿತು. ಈಗಿನ ಯುವಪೀಳಿಗೆ ಹಾಗೂ ಮದುವೆಯಾಗಿ ಇಲ್ಲಿಗೆ ಬಂದ ಮಹಿಳೆಯರಿಗೆ ಆ ಹೋರಾಟದ ಸಂಪೂರ್ಣ ಇತಿಹಾಸ ತಿಳಿದಿರಲು ಸಾಧ್ಯವಿಲ್ಲ. ಆದರೆ ಕುಳಾಲಿನ ಅಭಿವೃದ್ಧಿಯ ಹಿಂದೆ ದೊಡ್ಡ ತ್ಯಾಗ ಮತ್ತು ಶ್ರಮದ ಕಥೆಯಿದೆ,” ಎಂದು ಅವರು ಸ್ಮರಿಸಿದರು.
“ಈ ಭಾಗದ ಜನರು ನನ್ನ ಮೇಲೆ ಇಟ್ಟ ವಿಶ್ವಾಸದಿಂದಲೇ ನಾನು ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ನೀವು ನೀಡಿದ ಪ್ರೀತಿ ಮತ್ತು ಮತದ ಋಣವನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ತೀರಿಸಿದ ಆತ್ಮತೃಪ್ತಿ ನನಗಿದೆ,” ಎಂದು ತಿಳಿಸಿದ ಅವರು, ಅಭಿವೃದ್ಧಿಯ ಪಯಣದಲ್ಲಿ ಜನರ ಸಹಕಾರವೇ ತಮ್ಮ ಶಕ್ತಿಯಾಗಿದೆ ಎಂದು ಹೇಳಿದರು.
ನಂತರ ಈ ಭಾಗದ ಶಾಸಕರೂ ಮಾಜಿ ಮಂತ್ರಿ ಶ್ರಿ.ಬಿ.ರಮನಾಥ ರೈ,ಮಂಜುನಾಥ ಭಂಡಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಎಂ.ಎಸ್. ಮಹಮ್ಮದ್ ಅವರೊಂದಿಗೆ ಕೈಜೋಡಿಸಿ ಕುಳಾಲು ಭಾಗದ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ಸುಗ್ರಾಮದ ಹಾದಿ ಹಿಡಿಯಲು ಕಾರಣವಾಯಿತು ಎಂದು ತಿಳಿಸಿದರು.
ಈ ಭಾಗಕ್ಕೆ ಮೊದಲ ಹಂತದಲ್ಲಿ ಕಚ್ಚಾ ರಸ್ತೆ ನಿರ್ಮಾಣವಾಗುವುದರಿಂದ ಹಿಡಿದು, ನಂತರ ಡಾಮರೀಕರಣ ಹಾಗೂ ಇದೀಗ ಕಾಂಕ್ರೀಟೀಕರಣಗೊಳ್ಳುವವರೆಗೂ ಸಂಪೂರ್ಣ ಮುತುವರ್ಜಿವಹಿಸಿ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸಲು ಶ್ರಮಿಸಿದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ಸೇವೆಯನ್ನು ಸ್ಮರಿಸಿದ ಸ್ಥಳೀಯ ನಾಗರಿಕರು ಭಾವಪೂರ್ಣ ನಾಗರಿಕ ಸನ್ಮಾನ ನೀಡಿ ಗೌರವಿಸಿದರು. ಇದೇ ವೇಳೆ ಅವರ ಮುಂದಿನ ರಾಜಕೀಯ ಜೀವನ ಮತ್ತಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು.
ವಾರ್ಡಿನ ಅಭಿವೃದ್ದಿಯಲ್ಲಿ ಸಂಪೂರ್ಣ ಸಹಕಾರ ನೀಡುತ್ತಿರುವ ಗಂಗಾಧರ್ ಪೂಜಾರಿಯವರನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸಂಜೀವಿ,ರತ್ನಾ ಕುಳಾಲು,ಭಾಗೀರಥಿ,ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಹಸೈನಾರ್ ತಾಳಿತ್ತನೂಜಿ,ಹಿರಿಯರಾದ ರುಕ್ಮಯ ಪೂಜಾರಿ,ಉಮ್ಮರ್ ಹಾಜಿ,ಹರೀಶ್ ಗೌಡ,ರಾದಕೃಷ್ಣ ಪೂಜಾರಿ,ಮಹಮ್ಮದ್ ಕೋಡಿ,ಅಸೀಪ್ ಕುಳಾಲು,ಅಜೀಜ್ ಕುಳಾಲು ಬಂಡಮಗೇರು ಸೇರಿದಂತೆ ನಾಗರೀಕರು ಉಪಸ್ಥಿತರಿದ್ದರು.ಬಂಡಮುಗೇರು ಮಸೀದಿಯ ಗುರುಗಳಾದ ಹಬೀಬ್ ಜೌಹರಿ ಸ್ವಾಗತಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು






