May 14, 2026
image - 2026-05-14T090025.113

ಬೆಂಗಳೂರು: ರಾಜ್ಯದ ಶಾಲೆ ಮತ್ತು ಕಾಲೇಜುಗಳಲ್ಲಿ ವಿವಾದಕ್ಕೆ ಕಾರಣವಾಗಿದ್ದ ವಸ್ತ್ರಸಂಹಿತೆಯ ನಿಯಮಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ. ಸಿದ್ದರಾಮಯ್ಯ ಸರ್ಕಾರವು ಬುಧವಾರ ಹೊಸ ಆದೇಶ ಹೊರಡಿಸಿದ್ದು, ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ಹಿಜಾಬ್, ಜನಿವಾರ ಸೇರಿದಂತೆ ತಮ್ಮ ಧಾರ್ಮಿಕ ಪದ್ಧತಿಗನುಗುಣವಾದ ಸಂಕೇತಗಳನ್ನು ಧರಿಸಲು ಮುಕ್ತ ಅವಕಾಶ ಕಲ್ಪಿಸಿದೆ.

1ನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಸರ್ಕಾರದ ಆದೇಶದ ಮುಖ್ಯಾಂಶಗಳು ಹೀಗಿವೆ:

ಸಮವಸ್ತ್ರ ವಿಚಾರವಾಗಿ 2022ರ ಆದೇಶ ಹಿಂಪಡೆದು ಹೊಸ ಆದೇಶ.

ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳ ವಸ್ತ್ರಗಳಿಗೆ ಅವಕಾಶ ನೀಡಿ ಆದೇಶದಲ್ಲಿ ಉಲ್ಲೇಖ.

ಬಿಜೆಪಿ ಸರಕಾರ ಹೊರಡಿಸಿದ್ದ ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆದುಕೊಂಡ ಸಿದ್ದರಾಮಯ್ಯ ಸರ್ಕಾರ.

ಹಿಜಾಬ್, ಜನಿವಾರ, ರುದ್ರಾಕ್ಷಿಗೂ ಅವಕಾಶ

ಸರ್ಕಾರದ ಹೊಸ ಆದೇಶದ ಪ್ರಕಾರ, ಶಾಲಾ-ಕಾಲೇಜುಗಳು ನಿಗದಿಪಡಿಸಿದ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅನುಮತಿ ನೀಡಲಾಗಿದೆ. ಹಿಜಾಬ್ (Headscarf/ತಲೆವಸ್ತ್ರ), ಪೇಟ ಅಥವಾ ಟರ್ಬನ್ (Turban), ಜನಿವಾರ ಅಥವಾ ಪವಿತ್ರ ದಾರ, ಶಿವದಾರ ಮತ್ತು ರುದ್ರಾಕ್ಷಿ ಧರಿಸುವುದರಿಂದ ಶಾಲೆಯ ಶಿಸ್ತು ಅಥವಾ ಬೋಧನಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಸಾಂಪ್ರದಾಯಿಕ ಮತ್ತು ಪದ್ಧತಿ ಆಧಾರಿತ ಸಂಕೇತ ಸಮವಸ್ತ್ರಕ್ಕೆ ಪೂರಕವಾಗಿರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಹಿನ್ನೆಲೆ:
2022ರಲ್ಲಿ ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ವಿವಾದ ರಾಜ್ಯಾದ್ಯಂತ ಹರಡಿತ್ತು. ಅಂದಿನ ಬಿಜೆಪಿ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಈ ಆದೇಶವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈಗ ಕಾಂಗ್ರೆಸ್ ಸರ್ಕಾರವು ಆ ಹಳೆಯ ಆದೇಶವನ್ನು ರದ್ದುಗೊಳಿಸಿ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣದ ಸಮನ್ವಯತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ಆದೇಶ ಹೊರಡಿಸಿದೆ.

About The Author

Leave a Reply