

ನವದೆಹಲಿ: ದೇಶಾದ್ಯಂತ ನಿರೀಕ್ಷೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿದೆ. ತೈಲ ಮಾರಾಟ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಇಂಧನ ದರ ಏರಿಕೆಗೆ ಅನುಗುಣವಾಗಿ ದರವನ್ನು ಏರಿಕೆ ಮಾಡಿದೆ. ಪರಿಷ್ಕೃತ ದರ ಇಂದು ಬೆಳಿಗ್ಗೆಯಿಂದಲೇ ಜಾರಿಯಾಗಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪ್ರತಿ ಲೀಟರ್ ದರ 106.17 ರೂ. ಏರಿಕೆಯಾದರೆ ಡಿಸೇಲ್ ದರ 94.10 ರೂ. ತಲುಪಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸತತ ಏರಿಳಿತವಾಗುತ್ತಿದೆ. ಪಶ್ಚಿಮ ಏಷ್ಯಾ ಹಾಗೂ ಇರಾನ್ ಸಂಘರ್ಷದಿಂದಾಗಿ ತೈಲ ಸಾಗಣೆಯ ಜಲಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿದೆ. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿರುವುದರಿಂದ ಆಮದು ವೆಚ್ಚ ಹೆಚ್ಚಾಗಿದ್ದರಿಂದ ದರ ಏರಿಕೆ ಮಾಡಲಾಗಿದೆ.

ಟೆಂಪೋ ಮತ್ತು ಟ್ರಕ್‌ಗಳು ಡೀಸೆಲ್ ಬಳಸುವುದರಿಂದ ಸರಕು ಸಾಗಣೆ ದರಗಳು ತಕ್ಷಣವೇ ದುಬಾರಿಯಾಗಲಿವೆ. ಸಾಗಣೆ ವೆಚ್ಚ ಹೆಚ್ಚಾಗುವುದರಿಂದ ಮಾರುಕಟ್ಟೆಗೆ ಬರುವ ತರಕಾರಿ, ಹಣ್ಣು, ಧಾನ್ಯಗಳು ಮತ್ತು ಹಾಲಿನ ಬೆಲೆಗಳು ಹೆಚ್ಚಾಗಲಿವೆ. ಖಾಸಗಿ ಬಸ್ಸುಗಳು, ಆಟೋ ಮತ್ತು ಟ್ಯಾಕ್ಸಿಗಳ ಪ್ರಯಾಣ ದರವೂ ಏರಿಕೆಯಾಗಲಿದೆ. ಮಾರ್ಚ್ 2024 ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 2 ರಷ್ಟು ಕಡಿತಗೊಳಿಸಲಾಗಿತ್ತು.
ಜಾಗತಿಕ ಇಂಧನ ವ್ಯಾಪಾರ ಮಾರ್ಗಗಳಲ್ಲಿನ ಅಡಚಣೆಗಳ ಹೊರತಾಗಿಯೂ, ತಕ್ಷಣದ ಪೂರೈಕೆ ಅಡಚಣೆಯನ್ನು ತಪ್ಪಿಸಲು ಭಾರತವು ಪ್ರಸ್ತುತ ಸಾಕಷ್ಟು ಇಂಧನ ದಾಸ್ತಾನು ಹೊಂದಿದೆ ಎಂದು ಈ ವಾರದ ಆರಂಭದಲ್ಲಿ ತೈಲ ಇಲಾಖೆ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು. ಆದರೂ ಕಚ್ಚಾ ತೈಲ ಬೆಲೆಗಳು ಇನ್ನಷ್ಟು ಹೆಚ್ಚುತ್ತಲೇ ಇದ್ದರೆ ಮತ್ತು ಚಿಲ್ಲರೆ ಇಂಧನ ಬೆಲೆಗಳನ್ನು ಪರಿಷ್ಕರಿಸದಿದ್ದರೆ, ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಒಂದೇ ತ್ರೈಮಾಸಿಕದೊಳಗೆ ಸುಮಾರು 1 ಲಕ್ಷ ಕೋಟಿ ರೂ. ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದರು. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಸಹ ಇಂಧನ ಮಿತ ಬಳಕೆ ಹಾಗೂ ಚಿನ್ನ ಖರೀದಿ ನಿಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದರು ಎಂಬುದು ಗಮನಾರ್ಹ.






