

ಉಡುಪಿ: ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿ ಹ್ಯಾಂಡ್ ಬ್ಯಾಗ್ ಆರ್ಡರ್ ಮಾಡಲು ಹೋದ ಮಹಿಳೆಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಹಂತ ಹಂತವಾಗಿ ಬರೋಬ್ಬರಿ ₹9,00,442 ಕಳೆದುಕೊಂಡಿರುವ ದಾರುಣ ಘಟನೆ ಸಂತೆಕಟ್ಟೆ ಸಮೀಪ ನಡೆದಿದೆ.
ಸಂತೆಕಟ್ಟೆಯ ಶಾಂತಿವನ ನಿವಾಸಿ ವಂಚನೆಗೊಳಗಾದ ಮಹಿಳೆ. ಇವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ bagvogue.co__ ಎಂಬ ಐಡಿಯಿಂದ ಬಂದಿದ್ದ ಹ್ಯಾಂಡ್ ಬ್ಯಾಗ್ ಮಾರಾಟದ ಜಾಹೀರಾತನ್ನು ನೋಡಿ, ಬ್ಯಾಗ್ ಖರೀದಿಸಲು ಮೆಸೇಜ್ ಮಾಡಿದ್ದರು.

ವಂಚಕರು ಬ್ಯಾಗ್ ಬೆಲೆ ₹899 ಮತ್ತು ಡೆಲಿವರಿ ಚಾರ್ಜ್ ₹1950 ಸೇರಿ ಒಟ್ಟು ₹2,849 ಪಾವತಿಸುವಂತೆ ವಾಟ್ಸಾಪ್ ಮೂಲಕ ಕ್ಯೂಆರ್ ಸ್ಕ್ಯಾನರ್ ಕಳುಹಿಸಿದ್ದರು. ಸನೀನಾ ಅವರು ತಮ್ಮ ಯೂನಿಯನ್ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮೂಲಕ ಆ ಹಣವನ್ನು ಪಾವತಿಸಿದ್ದರು. ಆದರೆ, ಆ ಬಳಿಕ ವಾಟ್ಸಾಪ್ ಕರೆ ಮಾಡಿದ ಅಪರಿಚಿತ ವಂಚಕರು, ತಾಂತ್ರಿಕ ಕಾರಣಗಳನ್ನು ನೀಡಿ “ನೀವು ಕಳುಹಿಸಿದ ಹಣವನ್ನು ರಿಫಂಡ್ (ವಾಪಸ್) ಮಾಡುತ್ತೇವೆ, ಅದಕ್ಕಾಗಿ ಈ ಲಿಂಕ್/ಸ್ಕ್ಯಾನರ್ ಬಳಸಿ” ಎಂದು ನಂಬಿಸಿದ್ದಾರೆ.
ವಂಚಕರ ಮಾತು ನಂಬಿದ ಸನೀನಾ, ತಮ್ಮ ಹಾಗೂ ತಮ್ಮ ತಾಯಿ ಸಾಯಿರಾ ಬಾನು ಅವರ ಯೂನಿಯನ್ ಬ್ಯಾಂಕ್ ಖಾತೆಗಳಿಂದ ಮೇ 13ರ ವರೆಗೆ ಹಂತ ಹಂತವಾಗಿ ಒಟ್ಟು ₹9,00,442 ಹಣವನ್ನು ವರ್ಗಾವಣೆ ಮಾಡಿದ್ದಾರೆ. ಕೊನೆಗೆ ತಾವು ಬುಕ್ ಮಾಡಿದ ಬ್ಯಾಗೂ ಬಾರದೆ, ಕಟ್ಟಿದ ಹಣವೂ ವಾಪಸ್ ಸಿಗದೆ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಉಡುಪಿ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2026, ಐಟಿ ಆಕ್ಟ್ ಕಲಂ 66(ಡಿ) ಹಾಗೂ ಬಿಎನ್‌ಎಸ್ ಕಲಂ 318(4) ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ






