May 17, 2026
image - 2026-05-17T102152.042

ಹೈದರಾಬಾದ್: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಾಗೂ ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್ ಸಾಯಿ (25) ಅವರನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಶನಿವಾರ ತಡರಾತ್ರಿ ಮೇಡ್ಚಲ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಮೇ 29 ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ರವಾನಿಸಿದೆ.

ಕಳೆದ ಮೇ 8 ರಂದು ಹೈದರಾಬಾದ್‌ನ ಪೆಟ್‌ಬಶೀರ್‌ಬಾದ್ ಪೊಲೀಸ್ ಠಾಣೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯ ತಾಯಿ ದೂರು ದಾಖಲಿಸಿದ್ದರು. ಆರೋಪಿ ಭಗೀರಥ್ ಸಾಯಿ ಮದುವೆಯಾಗುವುದಾಗಿ ನಂಬಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆರಂಭದಲ್ಲಿ ಲೈಂಗಿಕ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು, ತದನಂತರ ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಪ್ರಕರಣಕ್ಕೆ ಮತ್ತಷ್ಟು ಕಠಿಣವಾದ ಪೋಕ್ಸೋ (POCSO) ಕಾಯ್ದೆಯ ‘ಸೆಕ್ಷನ್ 5(l) ಮತ್ತು 6’ (Aggravated Penetrative Sexual Assault) ಅನ್ನು ಸೇರ್ಪಡೆಗೊಳಿಸಿದ್ದಾರೆ.

ಆರೋಪಿ ಪರ ವಕೀಲರು ಹೈಕೋರ್ಟ್‌ನಲ್ಲಿ ಮುಂಗಡ ಜಾಮೀನು ಕೋರಿ, “ಇಬ್ಬರ ನಡುವೆ ಸೌಹಾರ್ದಯುತ ಸಂಬಂಧವಿತ್ತು. ಇದು ರಾಜಕೀಯ ಪ್ರೇರಿತ ಮತ್ತು ಸುಳ್ಳು ದೂರು” ಎಂದು ವಾದಿಸಿದ್ದರು. ಆದರೆ, ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಬಾಲಕಿಯ ಜನ್ಮ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ನೀಡಿ, ಆಕೆಗೆ 17 ವರ್ಷ ತುಂಬಿರುವುದು ನಿಜ ಎಂದು ಸಾಬೀತುಪಡಿಸಿದರು. ಉಭಯ ಪಕ್ಷಗಳ ಸುದೀರ್ಘ ವಾದ ಆಲಿಸಿದ ನ್ಯಾಯಮೂರ್ತಿ ಟಿ. ಮಾಧವಿ ದೇವಿ ಅವರ ಪೀಠವು, ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿ ತಿರಸ್ಕರಿಸಿತು.

ಹೈಕೋರ್ಟ್‌ನಿಂದ ಹಿನ್ನಡೆಯಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಸೈಬರಾಬಾದ್ ಪೊಲೀಸರು 5 ವಿಶೇಷ ತಂಡಗಳನ್ನು ರಚಿಸಿ ‘ಲುಕ್-ಔಟ್ ಸರ್ಕ್ಯುಲರ್’ (LoC) ಜಾರಿಗೊಳಿಸಿದ್ದರು. ಕರೀಮನಗರ ಮತ್ತು ಹೈದರಾಬಾದ್‌ನ ನಿವಾಸಗಳ ಮೇಲೆ ಶೋಧ ನಡೆಸಿದ ಪೊಲೀಸರು, ಕೊನೆಗೆ ಶನಿವಾರ ರಾತ್ರಿ ಹೊರವರ್ತುಲ ರಸ್ತೆಯ (ORR) ಜಂಕ್ಷನ್ ಬಳಿ ಭಗೀರಥ್ ಸಾಯಿಯನ್ನು ವಶಕ್ಕೆ ಪಡೆದರು.

ಇದೇ ವೇಳೆ ಆರೋಪಿ ಭಗೀರಥ್ ಸಾಯಿ ಕರೀಮನಗರ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಬಾಲಕಿ ಮತ್ತು ಆಕೆಯ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿ, ತನಗೆ 5 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಅವರು ಆರೋಪಿಸಿದ್ದಾರೆ. ಇದೊಂದು ವ್ಯವಸ್ಥಿತ ಹನಿ ಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲಿಂಗ್ ಯತ್ನ ಎಂದು ಸಾಯಿ ಪರ ವಕೀಲರು ಪ್ರತಿಪಾದಿಸಿದ್ದಾರೆ.

ಮಗನ ಬಂಧನದ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, “ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ನನ್ನ ದೃಢ ನಂಬಿಕೆ. ಕಾನೂನು ಮತ್ತು ನ್ಯಾಯಾಂಗದ ಮೇಲಿನ ಗೌರವದಿಂದಾಗಿ, ನನ್ನ ಪುತ್ರ ಬಂಡಿ ಭಗೀರಥ್ ನಮ್ಮ ವಕೀಲರ ಮೂಲಕ ಪೊಲೀಸರ ಮುಂದೆ ತನಿಖೆಗೆ ಹಾಜರಾಗಿದ್ದಾನೆ. ನನ್ನ ಸ್ವಂತ ಮಗನಾಗಲಿ ಅಥವಾ ಸಾಮಾನ್ಯ ನಾಗರಿಕನಾಗಲಿ, ಕಾನೂನು ಎಲ್ಲರಿಗೂ ಒಂದೇ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ನಿರಂತರವಾಗಿ ಹೇಳುತ್ತಿದ್ದಾನೆ. ನಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಕಾನೂನು ತಜ್ಞರ ಮುಂದೆ ಇಟ್ಟಿದ್ದೇವೆ. ನ್ಯಾಯ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದ್ದು, ಸತ್ಯ ಹೊರಬರಲಿದೆ” ಎಂದು ಹೇಳಿದ್ದಾರೆ.

ಕೇಂದ್ರ ಸಚಿವರ ಪುತ್ರನ ಪೋಕ್ಸೋ ಬಂಧನ ತೆಲಂಗಾಣ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಆಡಳಿತಾರೂಢ ಕಾಂಗ್ರೆಸ್ ನಾಯಕರು ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದಾರೆ. ಇತ್ತ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರವು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯ ಹಾಗೂ ಫೋನ್ ಚಾಟ್‌ಗಳ ಪರಿಶೀಲನೆ ನಡೆಸುತ್ತಿದ್ದಾರೆ.

About The Author

Leave a Reply