

ಮಂಗಳೂರು: ಉರ್ವ ಠಾಣಾ ವ್ಯಾಪ್ತಿಯಲ್ಲಿ ರಕ್ಷಣೆ ಕಾರ್ಯದ ವೇಳೆ ಏಕಾಏಕಿ ಚಲಿಸಿದ ಲಿಫ್ಟ್‌ನಲ್ಲಿ ಸಿಲುಕಿ ಬೆಲ್ತಂಗಡಿ ತಾಲೂಕಿನ ಬೆಳಾಲ್ ಪುಂಜಗೆರೆ ನಿವಾಸಿ ನೌಪಾಲ್ ಅವರು ಮೃತಪಟ್ಟ ಘಟನೆಗೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಸಾವು “ನ್ಯಾಯವೇ?” ಎಂದು ಪ್ರಶ್ನಿಸಿದ ಹರೇಕಳ, ದುರಂತ ನಡೆದ ಕಟ್ಟಡದ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ, ಲಿಫ್ಟ್ ನಿರ್ವಹಣೆ ಅಥವಾ ಸಂಬಂಧಿಸಿದ ಇಷ್ಟಮಾರ್ಟ್ ಕಂಪನಿಯ ಮಾಲಕರು ಮೃತ ನೌಪಾಲ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಂದೆ ಇಲ್ಲದ ನೌಪಾಲ್ ಕುಟುಂಬದ ಆಧಾರಸ್ತಂಭ
ಮೃತ ನೌಪಾಲ್ ತಂದೆ ಇಲ್ಲದವರಾಗಿದ್ದು, ಮಾತು ಬಾರದ ದಿವ್ಯಾಂಗರಾಗಿದ್ದರು. ಹಲ್ಲಿ ಗ್ರಾಮದಲ್ಲಿ ಹುಟ್ಟಿ, ತನ್ನ ಬದುಕಿಗಾಗಿ ದುಡಿಮೆ ಮಾಡುವ ಉದ್ದೇಶದಿಂದ ಮಂಗಳೂರಿಗೆ ಬಂದಿದ್ದ ನೌಪಾಲ್ ಕುಟುಂಬದ ಆಧಾರಸ್ತಂಭವಾಗಿದ್ದರು. ಅವರ ಅಕಾಲಿಕ ಸಾವಿನಿಂದ ಮನೆಯವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಲಿಫ್ಟ್ ಏಕಾಏಕಿ ಚಲಿಸಲು ಕಾರಣ, ನಿರ್ವಹಣೆಯಲ್ಲಿ ಲೋಪ ಇದೆಯೇ, ಕಟ್ಟಡ ಮಾಲಕರು ಸುರಕ್ಷತಾ ನಿಯಮ ಪಾಲಿಸಿದ್ದಾರೆಯೇ ಎಂಬ ಅಂಶಗಳ ಬಗ್ಗೆ ತನಿಖೆ ನಡೆಯಬೇಕಿದೆ.
“ಮೃತ ನೌಪಾಲ್ ಅವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ. ಮಾತು ಬಾರದ, ತಂದೆ ಇಲ್ಲದ ನೌಪಾಲ್ ತನ್ನ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದರು. ರಾಜ್ಯ ಸರ್ಕಾರ ಈ ಕುಟುಂಬಕ್ಕೆ ತಕ್ಷಣ ಸ್ಪಂದಿಸಬೇಕು” ಎಂದು ರಿಯಾಝ್ ಹರೇಕಳ ಒತ್ತಾಯಿಸಿದ್ದಾರೆ.






