May 27, 2026
IMG-20260527-WA0016

ಮಂಗಳೂರು/ತಿರುವನಂತಪುರ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಯುಡಿಎಫ್ ಸರ್ಕಾರದ ಗೃಹಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರಮೇಶ್ ಚೆನ್ನಿತ್ತಲ ಅವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ಹರೀಶ್ ಕುಮಾರ್ ಆತ್ಮೀಯವಾಗಿ ಭೇಟಿ ಮಾಡಿ ಅಭಿನಂದಿಸಿದರು. ವಿದ್ಯಾರ್ಥಿ ರಾಜಕೀಯ ದಿನಗಳಲ್ಲಿ ಆರಂಭವಾದ ಸ್ನೇಹ ಇಂದು ಸಹ ಅದೇ ಆತ್ಮೀಯತೆಯೊಂದಿಗೆ ಮುಂದುವರಿದಿರುವುದು ವಿಶೇಷವಾಗಿತ್ತು.ರಾಜೀವ್ ಗಾಂಧಿಯವರ ಯುವ ನಾಯಕತ್ವ ಬೆಳೆಸುವ ಕನಸಿನ ಭಾಗವಾಗಿ, ಯುವ ಕಾಂಗ್ರೆಸ್ ಸಂಘಟನೆಯಲ್ಲಿ ಚತುರ ಸಂಘಟಕರಾಗಿ ಗುರುತಿಸಿಕೊಂಡಿದ್ದ ರಮೇಶ್ ಚೆನ್ನಿತ್ತಲ ಅವರನ್ನು ಅಖಿಲ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅಲ್ಲದೆ ವಿವಿಧ ರಾಜ್ಯಗಳ ಉಸ್ತುವಾರಿಯ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದ ಅವರು, ದೇಶದ ಹಲವು ಭಾಗಗಳ ಯುವ ನಾಯಕರೊಂದಿಗೆ ಗಾಢ ಬಾಂಧವ್ಯ ಬೆಳೆಸಿಕೊಂಡಿದ್ದರು. ಆ ದಿನಗಳಲ್ಲಿ ದೆಹಲಿಯಲ್ಲಿ ಬೆಳೆದ ರಾಜಕೀಯ ಸ್ನೇಹ ಇಂದು ಸಹ ಅಚಲವಾಗಿ ಉಳಿದಿದೆ.ಅದೇ ಆತ್ಮೀಯತೆಯ ನೆನಪಿನೊಂದಿಗೆ ಹರೀಶ್ ಕುಮಾರ್ ಅವರು ಕೇರಳಕ್ಕೆ ಭೇಟಿ ನೀಡಿ ರಮೇಶ್ ಚೆನ್ನಿತ್ತಲ ಅವರನ್ನು ಅಭಿನಂದಿಸಿದರು. ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಹಳೆಯ ಸ್ನೇಹಿತರನ್ನು ಮರೆಯದೇ ಆತ್ಮೀಯವಾಗಿ ಬರಮಾಡಿಕೊಂಡ ರಮೇಶ್ ಚೆನ್ನಿತ್ತಲ ಅವರ ನಡೆ ಗಮನ ಸೆಳೆಯಿತು. ಭೇಟಿಯ ವೇಳೆ ವಿದ್ಯಾರ್ಥಿ ರಾಜಕೀಯದ ದಿನಗಳ ನೆನಪುಗಳನ್ನು ಇಬ್ಬರೂ ಹಂಚಿಕೊಂಡರು ಎಂದು ತಿಳಿದುಬಂದಿದೆ.ಹರೀಶ್ ಕುಮಾರ್ ಅವರಿಗೆ ಕೇರಳದ ಹಿರಿಯ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ವಿ.ಡಿ. ಸತೀಶನ್ ಸೇರಿದಂತೆ ಹಲವು ನಾಯಕರೊಂದಿಗೆ ಆತ್ಮೀಯ ಬಾಂಧವ್ಯವಿರುವುದರಿಂದ, ಈ ಭೇಟಿ ಕೇವಲ ರಾಜಕೀಯ ಸೌಜನ್ಯಕ್ಕೆ ಸೀಮಿತವಾಗದೆ ಹಳೆಯ ಸ್ನೇಹದ ಸೌಹಾರ್ದತೆಯ ಪ್ರತೀಕವಾಗಿ ಮೂಡಿಬಂತು. ವಿದ್ಯಾರ್ಥಿ ರಾಜಕೀಯದಲ್ಲಿ ಬೆಳೆದ ಬಾಂಧವ್ಯವು ಇಂದಿಗೂ ಅಷ್ಟೇ ಗಾಢವಾಗಿದೆ ಎಂಬುದಕ್ಕೆ ಈ ಭೇಟಿ ಸಾಕ್ಷಿಯಾಯಿತು.

About The Author

Leave a Reply