

ಮಣಿಪಾಲ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಹೂಡಿಕೆ ಹಾಗೂ ಟ್ರೇಡಿಂಗ್ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಉಡುಪಿಯ ಮಣಿಪಾಲದ ಖಾಸಗಿ ಕಂಪನಿಯೊಂದರ ಮ್ಯಾನೇಜರ್‌ಗೆ ಭಾರಿ ಮೊತ್ತದ ಹಣ ವಂಚಿಸಿರುವ ಘಟನೆ ನಡೆದಿದೆ. ಹೂಡಿಕೆ ಮಾಡಿದ ಹಣದ ಮೇಲೆ ಶೇ. 7 ರಷ್ಟು ಅಧಿಕ ಲಾಭ ಕೊಡುವುದಾಗಿ ನಂಬಿಸಿ ಬರೋಬ್ಬರಿ 3,50,000/- ರೂಪಾಯಿ ಹಣವನ್ನು ವರ್ಗಾಯಿಸಿಕೊಂಡು ದೋಖಾ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಗಳೂರಿನ ಕುಲಶೇಖರ ನಿವಾಸಿ, ಪ್ರಸ್ತುತ ಮಣಿಪಾಲದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಗಣೇಶ ಪಿ. ಎಲ್. (45) ವಂಚನೆಗೊಳಗಾದ ಪಿರ್ಯಾದಿದಾರರಾಗಿದ್ದಾರೆ. ಇವರ ದೂರಿನನ್ವಯ ಆರೋಪಿ ಅರವಿಂದ ನಾಯಕ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಪಿರ್ಯಾದಿದಾರ ಗಣೇಶ್ ಅವರಿಗೆ ತಮ್ಮ ಪರಿಚಯಸ್ಥರಾದ ಹರೀಶ್ ಎಂಬವರ ಮೂಲಕ ಆರೋಪಿ ಅರವಿಂದ ನಾಯಕ್ ಎಂಬಾತನ ಪರಿಚಯವಾಗಿತ್ತು. ಕಳೆದ ಮಾರ್ಚ್ 20, 2025 ರಂದು ಆರೋಪಿ ಅರವಿಂದ ನಾಯಕ್, ಅಲೆವೂರಿನಲ್ಲಿರುವ ತನ್ನ ‘ಅಕ್ಷಯ್ ಎಂಟರ್‌ಪ್ರೈಸಸ್’ ಎಂಬ ಕಚೇರಿಯಲ್ಲಿ ಗಣೇಶ್ ಅವರೊಂದಿಗೆ ಮಾತುಕತೆ ನಡೆಸಿದ್ದ. ಈ ವೇಳೆ ತಾನು ‘Mine Crypto’ ಎಂಬ ಹೆಸರಿನಲ್ಲಿ Forex ಟ್ರೇಡಿಂಗ್ ವ್ಯವಹಾರ ನಡೆಸುತ್ತಿದ್ದು, ಇದರಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ. 7 ರಷ್ಟು ಬಂಪರ್ ಲಾಭ ನೀಡುವುದಾಗಿ ಆಮಿಷವೊಡ್ಡಿದ್ದ.
ಆರೋಪಿಯ ಮಾತನ್ನು ನಿಜವೆಂದು ನಂಬಿದ ಗಣೇಶ್ ಅವರು, ಮಾರ್ಚ್ 21, 2025 ರಿಂದ ಮಾರ್ಚ್ 27, 2025 ರ ಅವಧಿಯಲ್ಲಿ ಮಂಗಳೂರಿನ ಪಣಂಬೂರು ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಖಾತೆಯಿಂದ, ದಿನಕ್ಕೆ 50,000/- ರೂಪಾಯಿಯಂತೆ ಆರೋಪಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಒಟ್ಟು 3,50,000/- ರೂಪಾಯಿ ಹಣವನ್ನು ಹಂತಹಂತವಾಗಿ ವರ್ಗಾಯಿಸಿದ್ದರು.ಹಣ ವರ್ಗಾವಣೆಯಾದ ಬಳಿಕ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣದ ಲಾಭದ ಬಗ್ಗೆ ಹಾಗೂ ಅಸಲು ಹಣದ ಬಗ್ಗೆ ಕೇಳಿದಾಗ, ಆರೋಪಿ ಅರವಿಂದ ನಾಯಕ್ ಸಿಸ್ಟಮ್‌ನಲ್ಲಿ ‘ತಾಂತ್ರಿಕ ಸಮಸ್ಯೆಗಳ ಇವೆ’ (Technical Issues) ಎಂದು ನೆಪ ಹೇಳುತ್ತಾ ಕಾಲಹರಣ ಮಾಡಿದ್ದಾನೆ. ಕೊನೆಗೆ ಹೂಡಿಕೆ ಮಾಡಿದ ಅಸಲು ಹಣವನ್ನೂ ನೀಡದೆ, ಹೇಳಿದಂತೆ ಲಾಭದ ಹಣವನ್ನೂ ನೀಡದೆ ನಂಬಿಸಿ ದ್ರೋಹ ಎಸಗಿದ್ದಾನೆ.ತಮಗೆ ಮೋಸವಾಗಿರುವುದು ಖಚಿತವಾಗುತ್ತಿದ್ದಂತೆ ಗಣೇಶ್ ಅವರು ಮಣಿಪಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಸದ್ಯ ಆರೋಪಿ ಅರವಿಂದ ನಾಯಕ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2026 ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ: 318, 316, 61(2), 340(2), 3(5) ರ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ






