

ಹಳೆಯಂಗಡಿ : ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ ಟಿಪ್ಪರ್ ಲಾರಿಯೊಂದು ಹಿಂಬದಿಯಿಂದ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಹಳೆಯಂಗಡಿ ಇಂದಿರಾ ನಗರ ಬಸ್ ನಿಲ್ದಾಣದ ಬಳಿ ಬುಧವಾರ (ಮೇ 27) ನಡೆದಿದೆ.
ಕಿನ್ನಿಗೋಳಿಯಿಂದ ಮಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸರ್ವಿಸ್ ಬಸ್ ಬುಧವಾರ ಹಳೆಯಂಗಡಿಯ ಇಂದಿರಾ ನಗರ ಬಸ್ ನಿಲ್ದಾಣದ ಬಳಿ ತಲುಪಿತ್ತು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ಬಸ್ ಚಾಲಕ ವಾಹನವನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಹಿಂಬದಿಯಿಂದ ಅತೀ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಬಸ್ಸಿನ ಹಿಂಭಾಗಕ್ಕೆ ರಭಸವಾಗಿ ಢಿಕ್ಕಿ ಹೊಡೆದಿದೆ.







