June 12, 2026
WhatsApp Image 2026-06-12 at 11.21.25 AM

ಬಾಲ್ಯದಲ್ಲಿ ಹಠಕ್ಕೋ, ಆಟಕ್ಕೋ ಮನೆ ಬಿಟ್ಟು ಹೋದ ಮಗ 26 ವರ್ಷಗಳ ನಂತರ ಮರಳಿ ಬಂದಿದ್ದಾನೆ. ಆದರೆ, ಹೋಗುವಾಗ ಇದ್ದ ‘ಸತೀಶ್’ ಈಗ ಮರಳಿ ಬರುವಾಗ ‘ಸಲೀಂ’ ಆಗಿದ್ದಾನೆ! ಹೌದು, ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಹೆತ್ತ ತಾಯಿಯ ಕಣ್ಣೀರಿಗೆ ಸಾಕ್ಷಾತ್ ಭಗವಂತನೇ ನಡೆಸಿಕೊಟ್ಟ ಮಹಾ ಪವಾಡವಿದು ಎಂದು ಎಲ್ಲರೂ ಮಾತಾಡುತ್ತಿದ್ದಾರೆ.

ಹೋಗುವಾಗ ಆತ 12 ವರ್ಷದ ‘ಸತೀಶ್’..!
ಇದು 2000ನೇ ಇಸವಿಯ ಕತೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅಶೋಕನಗರದ ನಿವಾಸಿ ಅಕ್ಕು ಎಂಬುವವರ ಮಗ ಸತೀಶ್. ಆಗಿನ್ನೂ 12 ವರ್ಷದ ಪುಟ್ಟ ಬಾಲಕ. ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದ ಆಕರ್ಷಣೆಗೆ ಒಳಗಾಗಿ, ಯಾರಿಗೂ ಹೇಳದೆ ಆ ತಂಡದ ಜೊತೆ ಈ ಬಾಲಕ ಊರು ಬಿಟ್ಟು ಹೋಗಿದ್ದ. ಅಲ್ಲಿಂದ ವಿಧಿಯ ಆಟ ಶುರುವಾಗಿತ್ತು. ಮಗನಿಗಾಗಿ ತಾಯಿ ಹುಡುಕದ ಜಾಗವಿಲ್ಲ, ಕಣ್ಣೀರು ಸುರಿಸದ ದಿನವಿಲ್ಲ. ಧರ್ಮಸ್ಥಳ, ಕಟೀಲು, ಪಣೋಲಿಬೈಲು ದೇವಸ್ಥಾನಗಳಿಗೆ ತಾಯಿ ಹೊತ್ತ ಹರಕೆಗೆ ಲೆಕ್ಕವೇ ಇರಲಿಲ್ಲ.

ಮರಳಿ ಬರುವಾಗ ಆತ ಮಹಾರಾಷ್ಟ್ರದ ‘ಸಲೀಂ’..!
ಸರ್ಕಸ್ ತಂಡದ ಜೊತೆ ಮಹಾರಾಷ್ಟ್ರ ಸೇರಿದ ಸತೀಶ್, ಕಾಲ ಕ್ರಮೇಣ ತನ್ನ ಊರು, ಹೆತ್ತವರು, ಕರಾವಳಿಯ ಭಾಷೆ ಎಲ್ಲವನ್ನೂ ಮರೆತುಹೋದ. ಪರಿಸ್ಥಿತಿಯ ಸುಳಿಯಲ್ಲಿ ಸಿಲುಕಿ ಆತನ ಹೆಸರೇ ಬದಲಾಯಿತು. ಸತೀಶ್ ಹೋಗಿ ‘ಸಲೀಂ ಅಬ್ದುಲ್ ಅನ್ಸಾರಿ’ ಆದ. ತಾಲೀಮಾ ಎಂಬಾಕೆಯನ್ನು ಮದುವೆಯಾಗಿ, ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿಗೆ ತಂದೆಯೂ ಆದ. ಕನ್ನಡ, ತುಳು ಸಂಪೂರ್ಣ ಮರೆತುಹೋಗಿ ಕೇವಲ ಹಿಂದಿಯಲ್ಲೇ ಮಾತನಾಡುವ ಪಕ್ಕಾ ಮಹಾರಾಷ್ಟ್ರದ ನಿವಾಸಿಯಾಗಿ ಬದಲಾಗಿದ್ದ.

ತಿರುವು ನೀಡಿದ ಆ ಒಂದು ಧರ್ಮಸ್ಥಳ ಪ್ರವಾಸ!
ಹೆಸರು, ಧರ್ಮ, ಭಾಷೆ ಎಲ್ಲವೂ ಬದಲಾಗಿದ್ದರೂ ಹೆತ್ತ ಕರುಳಿನ ಬಾಂಧವ್ಯ ಬದಲಾಗಲು ಸಾಧ್ಯವೇ? ಇತ್ತೀಚೆಗೆ ಸಲೀಂ (ಸತೀಶ್) ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರವಾಸ ಬಂದಿದ್ದ. ಕಾಕತಾಳೀಯ ಎಂಬಂತೆ ದೇವಸ್ಥಾನದ ಬಳಿ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬರುತ್ತಿದ್ದಂತೆ, ಆತನ ಸುಪ್ತಪ್ರಜ್ಞೆಯಲ್ಲಿದ್ದ ಬಾಲ್ಯದ ನೆನಪುಗಳು ಒಮ್ಮೆಲೇ ಜಾಗೃತವಾಗಿವೆ!

“ಇದೇ ನನ್ನ ಊರು, ನಾನು ಇಲ್ಲೇ ಇದ್ದವನು” ಎಂಬುದು ಆತನಿಗೆ ತಟ್ಟನೆ ನೆನಪಾಗಿದೆ. ಕೇವಲ ತಮ್ಮಂದಿರ ಹೆಸರು ಮಾತ್ರ ನೆನಪಿದ್ದ ಸಲೀಂ, ಸ್ಥಳೀಯ ಅಂಗಡಿಯವರ ಬಳಿ ವಿಚಾರಿಸುತ್ತಾ ಕೊನೆಗೂ 26 ವರ್ಷಗಳ ಬಳಿಕ ತನ್ನ ಸ್ವಂತ ಮನೆಗೆ ಹೆಜ್ಜೆ ಇಟ್ಟಿದ್ದಾನೆ!

ಹೆತ್ತ ಕರುಳಿನ ಕೂಗಿಗೆ ಒಲಿದ ಮಂಜುನಾಥ!
“ನಾನು ಕಣ್ಣು ಮುಚ್ಚುವ ಮುನ್ನ ನನ್ನ ಮಗನನ್ನು ಒಮ್ಮೆ ನೋಡುವಂತೆ ಮಾಡು ಅಪ್ಪಾ…” ಎಂದು ದಿನವೂ ಕಣ್ಣೀರು ಹಾಕುತ್ತಿದ್ದ ತಾಯಿ ಅಕ್ಕು ಅವರ ಪ್ರಾರ್ಥನೆ ಕೊನೆಗೂ ಫಲಿಸಿದೆ. ಹೋಗುವಾಗ ಇದ್ದ ಸತೀಶ್ ರೂಪ ಬದಲಿಸಿ, ಹೆಸರು ಬದಲಿಸಿ ಸಲೀಂ ಆಗಿ ಬಂದರೂ, ಹೆತ್ತ ತಾಯಿಗೆ ತನ್ನ ಮಗನನ್ನು ಗುರುತಿಸಲು ಕ್ಷಣಾರ್ಧ ಸಾಕಿತ್ತು.

ಹೆಸರು ಬದಲಾದರೂ ರಕ್ತದ ಬಾಂಧವ್ಯ ಬದಲಾಗಲಿಲ್ಲ. ತಾಯಿ-ಮಗನ ಈ ಅಪೂರ್ವ ಮತ್ತು ಭಾವುಕ ಸಂಗಮವನ್ನು ಕಂಡು ಇಡೀ ಗ್ರಾಮಸ್ಥರು ಭಾವುಕರಾಗಿದ್ದಾರೆ. ಮಂಜುನಾಥ ಸ್ವಾಮಿಯ ಈ ಪವಾಡಕ್ಕೆ ಇಡೀ ಊರೇ ಶರಣಾಗಿದೆ.

About The Author

Leave a Reply