June 15, 2026
WhatsApp Image 2026-06-15 at 5.51.04 PM

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಪಬ್‌ ಒಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆಗೆ ಇಬ್ಬರು ದುರ್ದೈವಿಗಳು ಸಜೀವ ದಹನವಾಗಿದ್ದು, ಏಳು ಜನರು ಗಂಭೀರವಾಗಿ ಗಾಯಗೊಂಡಿರುವ ಧೃತಿಗೆಡಿಸುವ ಘಟನೆ ನಡೆದಿದೆ.

ಮೈಸೂರಿನ ದಟ್ಟಗಳ್ಳಿ 4ನೇ ಹಂತದ ಬಳಿ ಇರುವ ಪ್ರಮುಖ ಪಬ್‌ನಲ್ಲಿ ಈ ದುರಂತ ಸಂಭವಿಸಿದೆ.

ಕ್ಷಣಾರ್ಧದಲ್ಲಿ ಬೂದಿಯಾದ ಪಬ್:

ದಟ್ಟಗಳ್ಳಿ 4ನೇ ಹಂತದ ಬಳಿಯಿರುವ ಪಬ್‌ನಲ್ಲಿ ಎಂದಿನಂತೆ ಗ್ರಾಹಕರು ಹಾಗೂ ಸಿಬ್ಬಂದಿ ಇದ್ದ ವೇಳೆ ಹಠಾತ್ತನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ನೋಡನೋಡುತ್ತಿದ್ದಂತೆಯೇ ಇಡೀ ಪಬ್‌ಗೆ ಜ್ವಾಲೆ ಆವರಿಸಿಕೊಂಡಿದೆ. ಪರಿಣಾಮವಾಗಿ ಇಡೀ ಪಬ್‌ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ತಕ್ಷಣವೇ ಹೊರಗೆ ಓಡಿಬರಲು ಸಾಧ್ಯವಾಗದೆ ಇಬ್ಬರು ವ್ಯಕ್ತಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.

7 ಜನರಿಗೆ ಗಂಭೀರ ಗಾಯ:

ದುರಂತದಲ್ಲಿ ಪಬ್‌ನಲ್ಲಿದ್ದ ಇತರ ಏಳು ಜನರಿಗೂ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ಅಥವಾ ಸಿಲಿಂಡರ್ ಸ್ಫೋಟದಿಂದ ಈ ದುರಂತ ಸಂಭವಿಸಿದೆಯೇ ಎಂಬ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

About The Author

Leave a Reply