

ಮಂಗಳೂರು:ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೀಡಿರುವ ವಿವಾದಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆಗೆ ಮಂಗಳೂರಿನಲ್ಲಿ ಸಚಿವ ಯು.ಟಿ. ಖಾದರ್ ಕಿಡಿಕಾರಿದ್ದಾರೆ. ಶಾಸಕರ ಈ ನಡವಳಿಕೆಯು ಕರಾವಳಿಯ ಹಿರಿಮೆ ಮತ್ತು ಗೌರವಕ್ಕೆ ಕಪ್ಪು ಚುಕ್ಕೆ ತಂದಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, “ಯಶ್‌ಪಾಲ್ ಸುವರ್ಣ ನೀಡಿರುವುದು ತೀರಾ ನಾಲಾಯಕ್ ಹೇಳಿಕೆ. ಇಂತಹ ಮಾತುಗಳಿಗೆ ಯಾವುದೇ ಮಹತ್ವ ಕೊಡುವ ಅಗತ್ಯವಿಲ್ಲ. ರಾಜಕೀಯವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೆಲವರು ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾರೆ” ಎಂದು ಹೇಳಿದರು.
“ರಾಹುಲ್ ಗಾಂಧಿ ಅವರ ಎತ್ತರವೆಲ್ಲಿ, ಇವರ ಮಟ್ಟವೆಲ್ಲಿ? ಹೇಳಿಕೆ ನೀಡಿದವರು ರಾಹುಲ್ ಗಾಂಧಿಯವರ ಕಾಲಿನ ಕಿರುಬೆರಳಿಗೂ ಸಮನಲ್ಲ. ಇಂತಹ ಅಸಂಸ್ಕೃತ ಮಾತುಗಳನ್ನು ಸ್ವತಃ ಅವರ ಮನೆಯವರಾಗಲಿ ಅಥವಾ ಅವರ ಮಕ್ಕಳಾಗಲಿ ಒಪ್ಪಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಶಾಸಕರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಖಾದರ್, “ಬಾಯಿ ತೆಗೆದರೆ ಸಾಕು ಧ್ವಂಸ ಎಂದು ಮಾತನಾಡುವ ಇವರ ಡಿಎನ್‌ಎ ಬಹುಶಃ ‘ತಾಲಿಬಾನ್ ಡಿಎನ್‌ಎ’ ಆಗಿರಬೇಕು. ದೇಶಕ್ಕಾಗಿ ತ್ಯಾಗ ಮಾಡಿದ ಗಾಂಧಿ ಕುಟುಂಬವನ್ನು ಈ ಮಣ್ಣಿನಿಂದ ಅಥವಾ ದೇಶದಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಉತ್ತರ ಭಾರತದಲ್ಲಿ ಇಂದಿರಾ ಗಾಂಧಿ, ದಕ್ಷಿಣ ಭಾರತದಲ್ಲಿ ರಾಜೀವ್ ಗಾಂಧಿ ಅವರ ರಕ್ತ ದೇಶದ ಶಾಂತಿ ಮತ್ತು ಸೌಹಾರ್ದತೆಗಾಗಿ ಈ ಮಣ್ಣಿನಲ್ಲಿ ಹರಿದಿದೆ” ಎಂದು ಸ್ಮರಿಸಿದರು.

“ತುಳುನಾಡಿನ ಜನರಿಗೆ ಹಾಗೂ ಇಲ್ಲಿನ ಜನಪ್ರತಿನಿಧಿಗಳಿಗೆ ಜಗತ್ತಿನಾದ್ಯಂತ ವಿಶೇಷ ಗೌರವವಿದೆ. ಇಲ್ಲಿನ ಪ್ರತಿಯೊಬ್ಬ ಜನಪ್ರತಿನಿಧಿಯೂ ಆ ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಇಂತಹ ಪ್ರಚೋದನಕಾರಿ ಮತ್ತು ಕೀಳುಮಟ್ಟದ ಹೇಳಿಕೆಗಳು ಕರಾವಳಿಯ ಸೌಹಾರ್ದ ಪರಂಪರೆಗೆ ದೊಡ್ಡ ಕಪ್ಪು ಚುಕ್ಕೆ ತರುತ್ತಿವೆ. ಅಸಂಸ್ಕೃತ ಮಾತುಗಳಿಂದ ಕರಾವಳಿಯ ಘನತೆಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು” ಎಂದು ಖೇದ ವ್ಯಕ್ತಪಡಿಸಿದರು.






