June 17, 2026
prakash-rai

ಬೆಂಗಳೂರು: “ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರದ ಪ್ರಕರಣದಲ್ಲಿ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ತಳುಕು ಹಾಕಿ, ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳಲ್ಲಿ ತೇಜೋವಧೆ ಮಾಡಲಾಗುತ್ತಿದೆ” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಪ್ರೆಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಪ್ರಮುಖ ವ್ಯಕ್ತಿ ಎನ್ನಲಾದ ಚಿನ್ನಯ್ಯನಿಗೂ ತಮಗೂ ಇರುವ ಲಿಂಕ್ ಹಾಗೂ ಹಣಕಾಸಿನ ಡೀಲ್ ಆರೋಪಗಳ ಸತ್ಯಾಂಶವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.“ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಎಂಬಾತ ತನಗೆ ಪ್ರಕಾಶ್ ರಾಜ್ ಕರೆ ಮಾಡಿ ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಕೇಳು ಎಂದು ಹೇಳಿದ್ದರು ಹಾಗೂ ಈ ಪ್ರಕರಣದಲ್ಲಿ 200 ಕೋಟಿ ರೂಪಾಯಿ ಪೇಮೆಂಟ್ ವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾನೆ. ಕೆಲವು ಮಾಧ್ಯಮಗಳಂತೂ ಈ ಷಡ್ಯಂತ್ರದಲ್ಲಿ ನನ್ನ ಕೈವಾಡ ಇದೆ ಎಂದೇ ಡಿಕ್ಲೇರ್ ಮಾಡಿಬಿಟ್ಟಿವೆ. ಆದರೆ, ನಾನು ಇದುವರೆಗೂ ಚಿನ್ನಯ್ಯ ಅಥವಾ ಮಟ್ಟಣ್ಣನವರ್ ಸೇರಿ ಯಾರನ್ನೂ ಖುದ್ದಾಗಿ ಭೇಟಿಯೇ ಮಾಡಿಲ್ಲ. ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಪ್ರಕಾಶ್ ರಾಜ್ 200 ಕೋಟಿ ಡೀಲ್ ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ 200 ಕೋಟಿ ರೂಪಾಯಿ ಹಣವನ್ನು ನಾನೆಲ್ಲಿಂದ ತರಲಿ? ಪವಿತ್ರ ಧರ್ಮಸ್ಥಳದ ಮೇಲೆ ನಾನು ಯಾಕೆ ಅಪಪ್ರಚಾರ ಮಾಡಲಿ?” ಎಂದು ಅವರು ಖಾರವಾಗಿ ಪ್ರಶ್ನಿಸಿದರು.ಚಿನ್ನಯ್ಯ ಕರೆ ಮಾಡಿರುವುದು ಸತ್ಯ ಎಂದ ಪ್ರಕಾಶ್ ರಾಜ್ ಈ ವೇಳೆ ನಾನು “ನೀನು ನನ್ನ ಮುಂದೆ ಹೇಳಿದ ಸತ್ಯವನ್ನು ಎಸ್‌ಐಟಿ (SIT) ಮುಂದೆ ಹೋಗಿ ಹೇಳು. ಸತ್ಯ ಹೇಳಿದರೆ ಊರೇ ಕೊಂಡಾಡುತ್ತೆ. ನಾನು ನಿನ್ನ ತಬ್ಬಿಕೊಳ್ತಿನಿ ಎಂದು ಹೇಳಿದ್ದೆ” ಎಂದು ಸ್ಪಷ್ಟಪಡಿಸಿದರು. “ಧರ್ಮಸ್ಥಳದಲ್ಲಿ ಸತ್ತಿರುವ ಹೆಣ್ಣು ಮಕ್ಕಳ ಮೇಲೆ ನಿಮಗೇಕೆ ಕನಿಕರ ಇಲ್ಲ? ಅಲ್ಲಿ ಮೃತಪಟ್ಟ ಹೆಣ್ಣು ಮಕ್ಕಳು ನಮ್ಮವರಲ್ವಾ? ಸೌಜನ್ಯ ಹೇಗೆ ಸತ್ತಳು ಮತ್ತು ಅಲ್ಲಿ ಉಳಿದ ಹೆಣ್ಣು ಮಕ್ಕಳ ಸಾವುಗಳು ಹೇಗೆ ಸಂಭವಿಸಿದವು ಎಂದು ಪ್ರಶ್ನಿಸುವುದು ತಪ್ಪಾ? ನಾನು ಆ ಸಾವುಗಳ ನ್ಯಾಯಕ್ಕಾಗಿ ಪ್ರಶ್ನೆ ಮಾಡಿದ್ದೇನೆಯೇ ಹೊರತು ಪವಿತ್ರ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿಲ್ಲ. ವಿಷಯವನ್ನು ತಿರುಚಿ ನನಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ನಾನು ಧರ್ಮ ವಿರೋಧಿ ಅಂತೆಲ್ಲಾ ಯಾಕೆ ಬಣ್ಣ ಬಳಿಯುತ್ತಿದ್ದೀರಾ?” ಎಂದು ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.

About The Author

Leave a Reply