

ಮಂಗಳೂರು:-ರಾಜ್ಯ ಸರ್ಕಾರದ ಮುಂದಿನ ಸಚಿವ ಸಂಪುಟ ಸಭೆಯನ್ನು ಕರಾವಳಿಯ ರಾಜಧಾನಿಯಾದ ಮಂಗಳೂರಿನಲ್ಲಿ ನಡೆಸಲು ಕರ್ನಾಟಕದ ಮುಖ್ಯಮಂತ್ರಿಗಳಾದ ಗೌರವಾನ್ವಿತ ಡಿ.ಕೆ. ಶಿವಕುಮಾರ್ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಸ್ವಾಗತಿಸಿದ್ದಾರೆ. ಆಡಳಿತ ಯಂತ್ರವನ್ನು ಜನಸಾಮಾನ್ಯರ ಬಾಗಿಲಿಗೆ ತಲುಪಿಸುವ ಈ ಕ್ರಮವು, ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ದಿಕ್ಕಿನಲ್ಲಿ ಒಂದು ಧನಾತ್ಮಕ ಹೆಜ್ಜೆಯಾಗಲಿ ಎಂದು ಅವರು ಹಾರೈಸಿದ್ದಾರೆ.ಮುಖ್ಯಮಂತ್ರಿಗಳ ನೇತೃತ್ವದ ಈ ಮಹತ್ವದ ಸಂಪುಟ ಸಭೆಯು ಕೇವಲ ಔಪಚಾರಿಕ ಸಭೆಯಾಗದೆ, ಈ ಭಾಗದ ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ವೇದಿಕೆಯಾಗಲಿ ಎಂದು ನಾವು ಆಶಿಸುತ್ತೇವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುರಿತಂತೆ ಕಳೆದ ಹಲವು ವರ್ಷಗಳಿಂದ ಸರ್ಕಾರಗಳು ತೋರುತ್ತಿರುವ ಮಲತಾಯಿ ಧೋರಣೆಯು ಕರಾವಳಿಯ ಜನತೆಯಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಈ ಹಿಂದೆ ಜಿಲ್ಲೆಯ ಇಬ್ಬರು ನಾಯಕರು ಮುಖ್ಯಮಂತ್ರಿಗಳಾಗಿದ್ದರೂ, ಜಿಲ್ಲೆಯ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿಯೇ ಉಳಿದಿರುವುದು ದುರದೃಷ್ಟಕರ ಎಂದಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಲಿರುವ ಸಂಪುಟ ಸಭೆಯು ಕೇವಲ ಔಪಚಾರಿಕವಾಗದೆ, ಕರಾವಳಿಯ ವಿಶೇಷ ಪರಿಗಣನೆಗೆ ಅಡಿಗಲ್ಲು ಹಾಕುವ ಗಂಭೀರ ಸಭೆಯಾಗಬೇಕು ಮತ್ತು ಕರಾವಳಿಯ ಜನರ ಭವಿಷ್ಯ ರೂಪಿಸುವ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಪಕ್ಷವು ಆಗ್ರಹಿಸುತ್ತದೆ.
ಪ್ರಮುಖ ಬೇಡಿಕೆಗಳು:
ಪ್ರವಾಸೋದ್ಯಮ ಅಭಿವೃದ್ಧಿ:
ಕರಾವಳಿಯ ಸಮುದ್ರ ತೀರಗಳು ಮತ್ತು ಪ್ರವಾಸಿ ತಾಣಗಳನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಸಮಗ್ರ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಬೇಕು. *ಪುತ್ತೂರು ಜಿಲ್ಲಾ ರಚನೆ:* ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ಪುತ್ತೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವ ಬಹುದಿನಗಳ ಬೇಡಿಕೆಯನ್ನು ಈ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಜಾರಿಗೆ ತರಬೇಕು.
ರಸ್ತೆ ಅಭಿವೃದ್ಧಿ:ಜಿಲ್ಲೆಯ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಮರಣಮೂಲಗಳಾಗಿ ಪರಿಣಮಿಸಿವೆ. ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಅವ್ಯವಸ್ಥೆ ಮತ್ತು ಗ್ರಾಮೀಣ ಸಂಪರ್ಕ ರಸ್ತೆಗಳ ದುಸ್ಥಿತಿಯಿಂದ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಈ ಸಭೆಯಲ್ಲಿ ಶಾಶ್ವತ ಪರಿಹಾರ ಸಿಗಬೇಕು. ವೈಜ್ಞಾನಿಕ ರಸ್ತೆ ನಿರ್ಮಾಣ ಮತ್ತು ತುರ್ತು ದುರಸ್ತಿಗೆ ಸರ್ಕಾರ ತಕ್ಷಣವೇ ಆದ್ಯತೆ ನೀಡಬೇಕು.
ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆ: ಕರಾವಳಿಯ ಜನಸಂಖ್ಯೆಯಲ್ಲಿ ಸುಮಾರು ನಲವತ್ತು ಶೇಕಡಾ ಹಾಗೂ ಜಗತ್ತಿನಾದ್ಯಂತ ಸುಮಾರು ಇಪ್ಪತ್ತು ಲಕ್ಷ ಜನಸಂಖ್ಯೆ ಇರುವ ಬ್ಯಾರಿ ಜನಾಂಗದ ಬಹುಕಾಲದ ಬೇಡಿಕೆಯಾದ ‘ಬ್ಯಾರಿ ಅಭಿವೃದ್ಧಿ ನಿಗಮ’ ಸ್ಥಾಪನೆ ಬಗ್ಗೆ ಸದ್ರಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಕಾರ್ಯರೂಪಕ್ಕೆ ತರಬೇಕು. ಆ ಮೂಲಕ ಬ್ಯಾರಿ ಜನಾಂಗದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಮೇಲೇತ್ತಲು ಸರ್ಕಾರ ಪ್ರಯತ್ನಿಸಬೇಕು.
ಮೂಲಸೌಕರ್ಯ ಮತ್ತು ಕೈಗಾರಿಕೆ:
ಕರಾವಳಿಯ ಬಂದರುಗಳ ಅಭಿವೃದ್ಧಿ ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಈ ಭಾಗದ ಆರ್ಥಿಕತೆಯನ್ನು ಬಲಪಡಿಸಬೇಕು.
ಕೃಷಿ ಮತ್ತು ಮೀನುಗಾರಿಕೆ:
ಕರಾವಳಿಯ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಮೀನುಗಾರರ ದಶಕಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧತೆ ತೋರಬೇಕು.
ಅಕ್ರಮ ಸಕ್ರಮ ಮತ್ತು 94c ಅರ್ಜಿ ವಿಲೇವಾರಿ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೂಳು ಹಿಡಿಯುತ್ತಿರುವ ಒಂದು ಲಕ್ಷದ ಇಪ್ಪತ್ತೇಳು ಸಾವಿರ 94/c ಮತ್ತು ಅಕ್ರಮ ಸಕ್ರಮ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಅರ್ಹರಿಗೆ ಹಕ್ಕುಪತ್ರ ನೀಡಲು ಸರಕಾರ ಮುಂದಾಗಬೇಕು. ಡಿ ಕೆ ಶಿವಕುಮಾರ್ ರವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಮ್ಮ ಆರನೇ ಗ್ಯಾರಂಟಿ ಭೂ ಗ್ಯಾರಂಟಿ ಎಂದು ಹೇಳಿದ್ದರು. ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ರೈತರಿಗೆ ಮತ್ತು ಜನಸಾಮಾನ್ಯರಿಗೆ ಪ್ರಯೋಜನ ಆಗುವ ರೀತಿಯಲ್ಲಿ ಇದನ್ನು ಜಾರಿಗೆ ತರಲು ತೀರ್ಮಾನ ಮಾಡಬೇಕು.
ಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿ:
ಕೆಂಪು ಕಲ್ಲು ಮತ್ತು ಮರಳು ನೀತಿಯಲ್ಲಿನ ಗೊಂದಲಗಳನ್ನು ನಿವಾರಿಸಬೇಕು. ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುವ ಕೈಗಾರಿಕೆಗಳನ್ನು ಸ್ಥಾಪಿಸಬೇಕು.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಸಭೆ ನಡೆಸುವ ಮೂಲಕ ಕರಾವಳಿಯ ನಾಡಿಮಿಡಿತವನ್ನು ಅರ್ಥಮಾಡಿಕೊಂಡು, ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂಬುದು ಜಿಲ್ಲೆಯ ಜನರ ವಿಶ್ವಾಸವಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಕರಾವಳಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಅನ್ವರ್ ಸಾದತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






