June 27, 2026
image-11

ಕಾಸರಗೋಡು: ಕ್ಯಾನ್ಸರ್‌ಗೆ ತುತ್ತಾಗಿ ನಿಧನರಾದ ಮೀ೦ಜ ಸಮೀಪದ ಚಿಗುರುಪಾದೆಯ ನಾರಾಯಣ (64) ಎಂಬ ಹಿಂದೂ ಸಹೋದರನ ಅಂತ್ಯಕ್ರಿಯೆ ನೆರವೇರಿಸಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ಸೌಹಾರ್ಧತೆಗೆ ಸಾಕ್ಷಿಯಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಧರ್ಮ, ರಾಜಕೀಯ ಗಡಿಗಳನ್ನು ಮರೆತು ಕುಟುಂಬ ಸದಸ್ಯರಂತೆ ಇರ್ಫಾನಾ ಇಕ್ಬಾಲ್ ಮಾನವೀಯತೆ ಸಾರಿದ್ದಾರೆ.

ಒಂದು ತಿಂಗಳ ಹಿಂದೆ ಅಂಗಡಿ ವರಾಂಡವೊಂದರಲ್ಲಿ ಅನ್ನ, ಆಹಾರ ಇಲ್ಲದೆ ದಯನೀಯ ಸ್ಥಿತಿಯಲ್ಲಿ ನಾರಾಯಣ ಪತ್ತೆಯಾಗಿದ್ದು, ವಾರ್ಡ್ ಸದಸ್ಯ ಶೆರೀಫ್ ಚೀನಾಲ ನೀಡಿದ ಮಾಹಿತಿಯಂತೆ ಇರ್ಫಾನಾ ಸ್ಥಳಕ್ಕೆ ತಲಪಿ ಬಳಿಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಕೀಯ ಅಧಿಕಾರಿಗೆ ತಿಳಿಸಿದ್ದರು. ಸೂಚನೆಯಂತೆ ಉಪ್ಪಳ ಶೇಖ್ ಸಯ್ಯಿದ್ ಫೌಂಡೇಶನ್ ಕಾರ್ಯಕರ್ತರು ಪ್ರಾಥಮಿಕ ಚಿಕಿತ್ಸೆ ನೀಡಿ ಕೋಜಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣ ಅವರು ಗುರುವಾರ ಮೃತಪಟ್ಟಿದ್ದರು.ಮೃತಪಟ್ಟ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತದೇಹ ಪಡೆದುಕೊಳ್ಳಲು ಕುಟುಂಬಸ್ಥರು ಮುಂದೆ ಬರಲಿಲ್ಲ. ಇಬ್ಬರು ಪತ್ನಿಯರು, ಮಕ್ಕಳು, ಸಹೋದರಿಯರಿರು ಇದ್ದರೂ ಮೃತದೇಹ ಪಡೆಯದೆ. ಸಂಸ್ಕರಿಸಲು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ರಿಗೆ ಒಪ್ಪಿಗೆ ಪತ್ರ ನೀಡಿದ್ದರು ಎನ್ನಲಾಗಿದೆ.ಇದರಂತೆ ಒಪ್ಪಿಗೆ ಪತ್ರವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹಸ್ತಾಂತರಿಸಿದ್ದರು. ಮೃತದೇಹವನ್ನು ಅಂಬ್ಯುಲೆನ್ಸ್ ಮೂಲಕ ತಂದು ಉಪ್ಪಳ ಚೆರುಗೋಳಿಯ ಸಾರ್ವಜನಿಕ ಸ್ಮಶಾನಕ್ಕೆ ತಲಪಿಸಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಇರ್ಫಾನಾ ಇಕ್ಬಾಲ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಸಾಮಾಜಿಕ ಕಾರ್ಯಕರ್ತರಾದ ರಿಯಾಜ್ ಪಿಲಾತ್ತರ, ಮೆಹಮ್ಮೂದ್ ಕೈಕಂಬ ಮೊದಲಾದವರು ಸಹಕರಿಸಿದರು.ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಜಿಲ್ಲಾ ಮಹಿಳಾ ಲೀಗ್ ಮುಖಂಡೆ ಇರ್ಫಾನಾ ಇಕ್ಬಾಲ್ ಮನೆಯವರಿಂದ ತೊರೆಯಲ್ಪಟ್ಟ 50 ರಷ್ಟು ಪೋಷಕರನ್ನು ಸಂರಕ್ಷಿಸುವ ಉಪ್ಪಳದ ಶೇಖ್ ಸಯ್ಯಿದ್ ವೃದ್ಧ ಮಂದಿರದ ಸ್ಥಾಪಕರಾಗಿದ್ದು, ಪತಿ ಇಕ್ಬಾಲ್ ಜೊತೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

About The Author

Leave a Reply